ಲಾಕ್ ಡೌನ್ ನಿಂದಾಗಿ ಚೇತರಿಕೆಗೆ ಇನ್ನಷ್ಟು ಸಯಮ ಪಡೆದ ಸಜನ್ ಪ್ರಕಾಶ್

ನವದೆಹಲಿ, ಏ 15,ಲಾಕ್ ಡೌನ್ ನಿಂದಾಗಿ ಥಾಯ್ಲೆಂಡ್ ನ ಫುಕೆಟ್ ತರಬೇತಿ ಕೇಂದ್ರದಲ್ಲಿ ಸಿಲುಕಿರುವ ಭಾರತದ ಈಜಪಟು ಸಜನ್ ಪ್ರಕಾಶ್, ಕೋವಿಡ್-19 ಮಧ್ಯೆಯೂ ಗಾಯದಿಂದ ಚೇತರಿಸಿಕೊಳ್ಳಲು ಮತ್ತಷ್ಟು ಸಮಯ ಕಂಡುಕೊಂಡಿದ್ದಾರೆ.ಈಜು ಸ್ಪರ್ಧೆಗಳಿಗಾಗಿ ತರಬೇತಿ ಪಡೆಯಲು ಕಳೆದ ಫೆಬ್ರವರಿಯಲ್ಲಿ ಫುಕೆಟ್ ಗೆ ತೆರಳಿದ್ದ ಸಜನ್, ಒಲಿಂಪಿಕ್ಸ್ ಗೆ ಎ ಅರ್ಹತೆಯನ್ನು ಪಡೆಯುವ ವಿಶ್ವಾಸ ಹೊಂದಿದ್ದರು. ಆದರೆ ಕೋವಿಡ್-19ನಿಂದಾಗಿ ದೇಶದಲ್ಲಿ ಲಾಕ್ ಡೌನ್ ಘೋಷಿಸಿರುವ ಕಾರಣ ರಾಷ್ಟ್ರೀಯ ದಾಖಲೆ ಒಡೆಯ ಸಜನ್ ನಗರದಲ್ಲಿ ಸಿಲುಕಿದ್ದಾರೆ.
ಈ ಕುರಿತು ಸುದ್ದಿ ಸಂಸ್ಥೆಯೊಂದಿಗೆ ಪ್ರತಿಕ್ರಿಯಿಸಿರುವ ಅವರು, ನಾನು ಫುಕೆಟ್ ನಲ್ಲಿ ಸುರಕ್ಷಿತವಾಗಿದ್ದೇನೆ ಎಂದಿದ್ದಾರೆ. ಅಂತಾರಾಷ್ಟ್ರೀಯ ಈಜು ಒಕ್ಕೂಟ (ಎಫ್ ಐಎನ್ಐ) ನೀಡುವ ವಿದ್ಯಾರ್ಥಿ ವೇತನ ಪಡೆಯುತ್ತಿರುವ ಸಜನ್, ತಾನ್ಯಪುರ ಅಕಾಡೆಮಿಯಲ್ಲಿ ಇತರ 18 ರಾಷ್ಟ್ರಗಳ ಈಜುಪಟುಗಳೊಂದಿಗೆ ತಂಗಿದ್ದು, ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ.
'' ತರಬೇತಿಗಾಗಿ ಫೆಬ್ರವರಿ 12ರಂದು ನಾನು ಇಲ್ಲಿಗೆ ಆಗಮಿಸಿದೆ. ಸದ್ಯ ಇಲ್ಲಿ ನಾನು ತುಂಬ ಸುರಕ್ಷಿತವಾಗಿದ್ದೇನೆ. ವಿದ್ಯಾರ್ಥಿವೇತನ ನೀಡುತ್ತಿರುವ ಫಿನಾ ಎಲ್ಲವನ್ನೂ ನೋಡುಕೊಳ್ಳುತ್ತಿದೆ. ಹೀಗಾಗಿ ನಾನು ಯಾವುದರ ಬಗ್ಗೆಯೂ ತಲೆಕೊಡಿಸಿಕೊಳ್ಳಬೇಕಿಲ್ಲ,  '' ಎಂದಿದ್ದಾರೆ.  ಟೋಕಿಯೊ ಒಲಿಂಪಿಕ್ಸ್ ಗೆ ಈಗಾಗಲೇ ಬಿ ಕ್ವಾಲಿಫಿಕೇಷನ್ ಹೊಂದಿರುವ ಸಜನ್, ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿರುವ ಕೂಟಕ್ಕೆ ನೇರ ಅರ್ಹತೆ ಹೊಂದಲು ಎ ಕ್ವಾಲಿಫಿಕೇಷನ್(1:56.48ಸೆ.) ಪಡೆಯಬೇಕಾದ ಅಗತ್ಯವಿದೆ. ಗಾಯದ ಕುರಿತು ಪ್ರತಿಕ್ರಿಯಿಸಿರುವ 26 ವರ್ಷದ ಈಜುಗಾರ, ಕುತ್ತಿಗೆ ಗಾಯದಿಂದ ಈಗಷ್ಟೇ ಹೊರಬರುತ್ತಿದ್ದೇನೆ. ಹೀಗಾಗಿ ಇತರ ತಾಲೀಮುಗಳೊಂದಿಗೆ ಪುನರ್ವಸತಿ ವ್ಯಾಯಾಮ ಮಾಡುವತ್ತ ಗಮನ ಹರಿಸಿದ್ದೇನೆ. ನಾನು ತುಂಬಾ ಅದೃಷ್ಟಶಾಲಿಯಾಗಿದ್ದು, ಲಾಕ್ ಡೌನ್ ನಿಂದಾಗಿ ಚೇತರಿಸಿಕೊಳ್ಳಲು ಇನ್ನಷ್ಟು ಸಮಯ ಸಿಕ್ಕಂತಾಗಿದೆ, ಎಂದು ಹೇಳಿದ್ದಾರೆ.