ವೈಚಾರಿಕತೆಯ ಭದ್ರ ಬುನಾದಿಯನ್ನು ಹಾಕಿದ್ದು ಶಾಹೂ ಮಹಾರಾಜರು: ಕಾಂಬಳೆ

ಧಾರವಡ 27: ಇತಿಹಾಸವೆಂಬುದು ನಮ್ಮ ಎಲ್ಲಾ ನಡೆ-ನುಡಿ, ಆಚಾರ-ವಿಚಾರಗಳಿಗೆ ಬುನಾದಿ ಇದ್ದಂತೆ. ಆ ಬುನಾದಿಯ ಸಾಮಥ್ರ್ಯ ಮತ್ತು ಮಹತ್ವ ಅರಿತುಕೊಂಡಾಗ ಮಾತ್ರ ಸಮಕಾಲೀನ ವೈಚಾರಿಕತೆಯ ಸುಭದ್ರ ಬಿಲ್ಡಿಂಗ್ ಕಟ್ಟಬಹುದು. ಅಂತಹ ವೈಚಾರಿಕತೆಯ ಭದ್ರ ಬುನಾದಿಯನ್ನು ಸಾಮಾಜಿಕ ಪರಿವರ್ತನ ಚಳುವಳಿಯ ಸಂದರ್ಭದಲ್ಲಿ ರಾಜ ಪ್ರಭುತ್ವದಲ್ಲಿ ಕೊಲ್ಹಾಪೂರ ಸಂಸ್ಥಾನದ ಶಾಹೂ ಮಹಾರಾಜರು ಹಾಕಿದ್ದು, ಅದರ ಫಲವನ್ನು ನಾವೀಗ ಪ್ರಜಾಪ್ರಭುತ್ವದಲ್ಲಿ ಅನುಭವಿಸುತ್ತಿದ್ದೇವೆ. ಅಂತಹ ಮಹನೀಯರ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಗಣಕರಂಗದ ಗೆಳೆಯರು ಉತ್ತಮವಾದ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ರವೀಂದ್ರ ಕಾಂಬಳೆ ಅಭಿಪ್ರಾಯ ಪಟ್ಟರು.

ಅವರು ಇಂದು (ಜೂ.26) ಧಾರವಾಡದಲ್ಲಿ ಗಣಕರಂಗ ಸಂಸ್ಥೆ ಆಯೋಜಿಸಿದ್ದ ಸಾಮಾಜಿಕ ಪರಿವರ್ತನ ಚಳುವಳಿಗಾರರ ನೆನಪಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಛತ್ರಪತಿ ಶಾಹೂ ಮಹಾರಾಜರ 145ನೇಯ ಜಯಂತಿ ಕಾರ್ಯಕ್ರಮ ಮತ್ತು 3ಬಿ ಕವಿಗೋಷ್ಟಿಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. 

ಶೋಷಿತ ಸಮುದಾಯದ ಪ್ರತಿಭಾವಂತರಿಗೆ ಪ್ರೋತ್ಸಾಹ ನೀಡುವ ಉದಾರ ಹೃದಯವಂತರಾಗಿದ್ದರು. ಅದಕ್ಕೆ ಉದಾಹರಣೆಯಾಗಿ ಬಾಬಾಸಾಹೇಬ ಡಾ.ಅಂಬೇಡ್ಕರ್ ಅವರ ವಿದೇಶದ ವ್ಯಾಸಂಗಕ್ಕೆ ಮತ್ತು ಮೂಕನಾಯಕ ಪತ್ರಿಕೆಯ ಪ್ರಕಟಣೆಗೆ ಹಣ ನೀಡಿ ಪ್ರೋತ್ಸಾಹಿಸಿದ್ದು ಸೇರಿದಂತೆ ಹಲವರಿಗೆ ಹಲವಾರು ರೀತಿಯ ಸಹಾಯ ಮಾಡಿದ್ದು, ಅದರ ಫಲಾನುಭವಿಗಳು ಇಂದಿನ ಕೊಲ್ಲಾಪೂರ ಭಾಗ ಸೇರಿದಂತೆ ಬೆಳಗಾವಿ ಭಾಗದಲ್ಲಿ ಇಂದಿಗೂ ಉಪಕಾರ ಸ್ಮರಿಸಿಕೊಳ್ಳುವುದನ್ನು ಕಾಣಬಹುದು ಎಂದು ಹೇಳಿದರು. 

ಛತ್ರಪತಿ ಶಾಹೂ ಮಹಾರಾಜರ ಭಾವಚಿತ್ರಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ನಂತರ ಪ್ರಾಸ್ತಾವಿಕವಾಗಿ ಮಾತನಾಡಿದ ಚಿಂತಕ ಲಕ್ಷ್ಮಣ ಬಕ್ಕಾಯಿ ಅವರು, ಇಂದಿನ ಕಾಲದ ಆಡಳಿತಗಾರರನ್ನು ಪ್ರಶ್ನಿಸುವ ಜಾಗೃತಿಯನ್ನು ನಾಗರಿಕ ಪ್ರಜೆಗಳು ಹೊಂದಬೇಕಾಗಿದೆ. ಅದಕ್ಕಾಗಿ ಇತಿಹಾಸದಲ್ಲಿ ಆಗಿ ಹೋದ ಶಾಹೂ ಮಹಾರಾಜರಂತಹ ಪ್ರಗತಿಪರ ಧೊರಣೆಯ ದೊರೆಯ ಕುರಿತು ತಿಳಿಸಿಕೊಡುವ ಸಲುವಾಗಿ ಇಂದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. 

ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಸಿ.ಎಂ,ಚನ್ನಬಸಪ್ಪ ವಹಿಸಿಕೊಂಡು ತಮ್ಮದೊಂದು ಕವನ ವಾಚಿಸಿದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಕವಿ-ಕವಿಯಿತ್ರಿಯರು ತಮ್ಮ ಕವನ ವಾಚಿಸಿದರು. ಭಾಗವಹಿಸಿದ ಕವಿ-ಕವಿಯಿತ್ರಿಯರಿಗೆ ಪ್ರಮಾಣ ಪತ್ರ ಮತ್ತು ಗ್ರಂಥ ಸಮರ್ಪಣೆ ನೀಡಿ ಗೌರವಿಸಲಾಯಿತು. ರಂಗಕರ್ಮ  ಹಿಪ್ಪರಗಿ ಸಿದ್ಧರಾಮ ಕಾರ್ಯಕ್ರಮ ಸಂಯೋಜಿಸಿ, ನಿರ್ವಹಿಸುತ್ತಾ ಶಾಹೂ ಮಹಾರಾಜರ ಕುರಿತು ಹಲವಾರು ಸಂಗತಿಗಳನ್ನು ನಿರೂಪಿಸಿದರು. 

ಡಾ.ಅನ್ನಪೂರ್ಣ ತಳಕಲ್ಲ, ಶರಣಪ್ಪ ಹೊಸಮನಿ, ಶಂಕ್ರಪ್ಪ ನಡಮನಿ, ಭೀಮನಗೌಡ ಕಠಾವಿ, ಚಂದ್ರಕಾಂತ ಹಡಗಲಿ, ಮಧುಮತಿ ಸಣಕಲ್ಲ ಮುಂತಾದವರು ಉಪಸ್ಥಿತರಿದ್ದರು.