ಬೆಳಗಾವಿ 29: ಶತಮಾನಗಳ ಹಿಂದೆ ಸ್ಮಶಾನ ದಂತಿದ್ದ ಶಿವಬಸವ ನಗರವನ್ನು ತಮ್ಮ ಪಾದಸ್ಪರ್ಶ, ಕಾಯಕ, ದಾಸೋಹ ಹಾಗು ಪ್ರಸಾದ ನೀಡುವುದರ ಮೂಲಕ ಪಾವನ ಕ್ಷೇತ್ರವನ್ನಾಗಿಸಿದವರು ನಾಗನೂರು ರುದ್ರಾಕ್ಷಿ ಮಠದ ಲಿಂಗೈಕ್ಯ ಶಿವಬಸವ ಮಹಾಸ್ವಾಮಿಗಳು ಎಂದು ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು. ಅವರು ಇಂದು ರುದ್ರಾಕ್ಷಿ ಮಠದ ಪ್ರಭುದೇವ ಸಭಾಗ್ರಹದಲ್ಲಿ ಬಸವ ಜಯಂತಿ ನಿಮಿತ್ಯ ಜಾಗತಿಕ ಲಿಂಗಾಯತ ಮಹಾಸಭೆಯ ವತಿಯಿಂದ ಆಯೋಜಿಸಿದ್ದ ಎರಡನೇ ದಿನದ ಪ್ರವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮುಂದುವರೆದು ಮಾತನಾಡಿದ ಶ್ರೀಗಳು ಬಾಲ್ಯದಲ್ಲಿ ತಾಯಿ, ಶಾಲಾ ಹಂತದಲ್ಲಿ ಶಿಕ್ಷಕರು ತದನಂತರ ಆಧ್ಯಾತ್ಮ ಗುರುಗಳು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುತ್ತಾರೆ. ಸ್ವತಃ ಭಗವಂತ ಸಿಟ್ಟಾದರೂ ಈ ಮೂರು ಜನ ಪ್ರೀತಿ, ವಾತ್ಸಲ್ಯ ಮಮಕಾರದಿಂದ ನಮ್ಮನ್ನು ಸಲಹುತ್ತಾರೆ. ಇವರ ಬಗ್ಗೆ ಸದಾ ಗೌರವ ಭಾವನೆ ಹೊಂದಬೇಕು ಎಂದರು.
ವೇದಿಕೆ ಮೇಲೆ ಉಪಸ್ಥಿತರಿದ್ದ ಷಣ್ಮುಖ ಶಿವಯೋಗಿಗಳ ಮಠದ ವೀರಸಿದ್ಧ ದೇವರು ಮಾತನಾಡಿ ಯಾವುದರಿಂದ ಸುಖ, ಸಂತೋಷ, ನೆಮ್ಮದಿ, ತೃಪ್ತಿಗಳು ಸಿಗುತ್ತವೆ ಎಂದು ನಾವು ಭಾವಿಸಿಕೊಂಡಿದ್ದೀವೋ ಅವುಗಳಿಂದ ನಿಜವಾಗಿಯೂ ದೊರೆಯದು. ಬದಲಿಗೆ ಸಜ್ಜನರ ಸಾಮೀಪ್ಯವೇ ನಮಗೆ ಹೆಚ್ಚಿನ ಸುಖವನ್ನೂ ನೆಮ್ಮದಿಯನ್ನೂ ತೃಪ್ತಿಯನ್ನೂ ಆಹ್ಲಾದವನ್ನೂ ನೀಡುತ್ತದೆ ಜಾಗು ಸಜ್ಜನರ ಸಂಗದಿಂದ ಸುಸಂಸ್ಕೃತ ಸಮಾಜ ನಿರ್ಮಾಣವಾಗುತ್ತದೆ ಎಂದರು.
ಕುಲವಳ್ಳಿ ಸುಕುಮಾರ ಯೋಗಾಶ್ರಮದ ಮಲ್ಲಿಕಾರ್ಜುನ ದೇವರು ಪ್ರವಚನ ನೀಡಿದರು. ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.