ಧಾರವಾಡ 18: ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗ್ರಾಮೀಣ ಹಾಗೂ ಶಹರ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಧಾರವಾಡ ತಾಲೂಕಿನ ಪ್ರೌಢ ಶಾಲಾ ಕನ್ನಡ ಭಾಷಾ ವಿಷಯ ಬೋಧಕರ ಹಾಗೂ ಶಹರ ವಲಯದ ಗಣಿತ ಬೋಧನಾ ಶಿಕ್ಷಕರಿಗೆ ಗುರು ಪ್ರೇರಣಾ ತರಬೇತಿಯು ಸರ್ಕಾರಿ ಮಹಿಳಾ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ ಸೋಮವಾರ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಮಾತನಾಡಿ, ಶಾಲೆಗಳಲ್ಲಿ ಕಂಡುಕೊಂಡ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳಲು, ಶಿಕ್ಷಕರಿಗೆ ಶೈಕ್ಷಣಿಕ ಸಾಮಥ್ರ್ಯಗಳನ್ನು ಹೆಚ್ಚಿಸಿಕೊಳ್ಳಲು ಈ ತರಬೇತಿಯನ್ನು ಆಯೋಜಿಸಲಾಗಿದೆ. ಶಿಕ್ಷಕರಿಗೆ ಪ್ರೇರಣೆ ನೀಡಿ, ತರಬೇತಿಯನ್ನು ಪೂರ್ಣ ಸದುಪಯೋಗಪಡಿಸಿಕೊಂಡು ಶಾಲಾ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಹೆಚ್ಚಿಸಲು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿದ್ಯಾ ನಾಡಿಗೇರ ಮಾತನಾಡಿ, ಗುರು ಪ್ರೇರಣಾ ತರಬೇತಿಯು ಶಿಕ್ಷಕರಿಗೆ ಅವಶ್ಯಕವಾಗಿದೆ. ತರಬೇತಿಯಲ್ಲಿ ಶಿಕ್ಷಕರು ತಮ್ಮ ಬೋಧನೆಯಲ್ಲಿ ಕ್ಲಿಷ್ಟಕರವಾದ ಸಾಮಥ್ರ್ಯಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಹಾಗೂ ತರಬೇತಿಯ ಗುರಿ ಮತ್ತು ಉದ್ದೇಶಗಳನ್ನು ತಿಳಿಸಿದರು.
ಡಯಟ್ನ ಹಿರಿಯ ಉಪನ್ಯಾಸಕ ಡಾ. ಗುರುನಾಥ ಹೂಗಾರ, ಮುಖ್ಯೋಪಾಧ್ಯಾಯ ಬಂಗಾರಿಮಠ, ಪಾಟೀಲ, ಸಂಪನ್ಮೂಲ ವ್ಯಕ್ತಿಗಳಾದ ಬೆನಕನಾಳ, ಚೌಗಲೆ ಹಾಗೂ ಶಹಾಪೂರಮಠ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎನ್. ಎ. ದಫೇದಾರ ಸ್ವಾಗತಿಸಿದರು. ಎಚ್ ಎಸ್ ಬಡಿಗೇರ ನಿರೂಪಿಸಿದರು. ಎಸ್ ಎಸ್ ಸವಾಯಿ ವಂದಿಸಿದರು.