ಸಾಣೇಹಳ್ಳಿ 28: ರೋಮ್- ಬೆಂಗಳೂರಿನ ರಾಷ್ಟ್ರೀಯ ಬಸವ ಪ್ರತಿಷ್ಠಾನ ಹಾಗೂ ಟಿಸಿಎಸ್ ಡ್ರೀಮ್ ಹಾಲಿಡೇಸ್ ಮುಖ್ಯಸ್ಥ ಎಸ್.ಎಂ.ಸುರೇಶ್ ಅವರು ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯರ ಸಾನಿಧ್ಯದಲ್ಲಿ ಆಯೋಜಿಸಿದ್ದ ಯುರೋಪಿನ ಪ್ರವಾಸ ರೋಮ್ ನಗರದಲ್ಲಿರುವ ಸಂಪನ್ನವಾಯಿತು.
ಐವತ್ತು ಜನರ ಎರಡು ತಂಡಗಳ ಪ್ರವಾಸ ಇದಾಗಿತ್ತು. ‘ಭಾರತ ವಚನ ಸಂಸ್ಕೃತಿ ಯಾತ್ರಾ’ ದಲ್ಲಿ ಲಂಡನ್, ಪ್ಯಾರಿಸ್ ನಗರಗಳಲ್ಲಿ ಬಸವ ತತ್ವ ಪ್ರಚಾರದ ಉದ್ದೇಶದಿಂದ ಈ ಪ್ರವಾಸವನ್ನು ಆಯೋಜಿಸಲಾಗಿತ್ತು. ನಾಡಿನ ಹೆಸರಾಂತ ಉದ್ಯಮಿಗಳು, ಸಾಹಿತಿಗಳು, ಕಲಾವಿದರು, ಶಿಕ್ಷಣ ತಜ್ಞರು ಹಾಗೂ ಮಹಿಳೆಯರು ಪ್ರವಾಸ ತಂಡದಲ್ಲಿದ್ದರು.
ಪ್ರತಿನಿತ್ಯ ಪಯಣದಲ್ಲಿ ಬೆಳಗಿನ ವಚನ ಪ್ರಾರ್ಥನೆ ಹಾಗೂ ಶಿವಾನುಭವ ಇರುತ್ತಿತ್ತು. ಪೂಜ್ಯರ ಸಾನಿಧ್ಯದಲ್ಲಿ, ಚಲನಚಿತ್ರ ನಟಿ, ಶಾಸಕಿ ಉಮಾಶ್ರೀ, ಪ್ರೊ. ಸಿದ್ದು ಯಾಪಲಪರವಿ, ಪ್ರೊ. ಬಿ.ಆರ್. ಪೋಲಿಸ್‌ಪಾಟೀಲ, ಬಸವರಾಜ ರೊಟ್ಟಿ, ಬಸನಗೌಡ ಹರನಾಳ, ಅಶೋಕ ಮಳಗಲಿ, ಅನ್ನಪೂರ್ಣ ಮಳಗಲಿ, ನಾಗರಾಜ್, ಝಾಕೀರ್ ನದಾಫ್, ಕೊಳ್ಳೇಗಾಲದ ಪ್ರದೀಪ್ ಹೀಗೆ ಅನೇಕರು, ಒಂದೊಂದು ವಿಷಯಗಳ ಕುರಿತ ಸಂವಾದ, ಪ್ರತಿ ಸಂವಾದ ನಡೆಯುತ್ತಿತ್ತು.
ಅತ್ಯಂತ ಮಹತ್ವದ ಸಂಗತಿ ಎಂದರೆ ಕ್ರಿಶ್ಚಿಯನ್ ಧರ್ಮದ ಪವಿತ್ರ ಕ್ಷೇತ್ರ ವ್ಯಾಟಿಕನ್ ನಗರದ ‘ಸೇಂಟ್ ಪೀಟರ್ಸ್ ಬೆಸಿಲಿಕಾ’ ಚರ್ಚಿನಲ್ಲಿ ವಚನ ಪ್ರಾರ್ಥನೆ ಮಾಡಲಾಯಿತು. ಲಿಂಗಾಯತ ಧರ್ಮದ ವಿಶ್ವಮಾನ್ಯ ಮೌಲ್ಯಗಳ ಕುರಿತು ಸಾಣೇಹಳ್ಳಿ ಶ್ರೀಗಳು ಆಶೀರ್ವಚನ ನೀಡಿದರು. ಬಸವಣ್ಣನವರು ಬೃಹತ್ ಸ್ಥಾವರಕ್ಕಿಂತ, ಮಹಾ ಬಯಲಿಗೆ ಹೆಚ್ಚು ಮಹತ್ವ ನೀಡಿದರು, ಏಕೆಂದರೆ ‘ಸ್ಥಾವರಗಳಿಗೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ’ ಎಂಬ ಪರಮ ಸತ್ಯವನ್ನು ಅರಿತವರಾಗಿದ್ದರು. ಆದರೆ ಇತರ ಧರ್ಮಗಳು ಪವಿತ್ರ ಕ್ಷೇತ್ರಗಳ ಸ್ವಚ್ಛತೆ ಹಾಗೂ ಭವ್ಯತೆಯನ್ನು ಅರ್ಥ ಮಾಡಿಕೊಂಡು ಅವುಗಳ ಸಂರಕ್ಷಣೆ ಮಾಡಿದ್ದಾರೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ವಚನ ಟಿವಿ ನಿರ್ದೇಶಕ ಸಿದ್ದು ಯಾಪಲಪರವಿ ಮಂದಿರ, ಮಸೀದಿ ಏನೇ ಇದ್ದರೂ ಮೂಲ ಉದ್ದೇಶ ಶಾಂತಿ, ಸಂಯಮ ಮತ್ತು ಸಮಾನತೆಯನ್ನು ಬಯಸುತ್ತವೆ, ಜಗತ್ತಿನಲ್ಲಿ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಯುರೋಪಿನ ಜನರ ಇತಿಹಾಸ ಪ್ರಜ್ಞೆ ಅನುಕರಣೀಯ ಎಂದರು. ಯುರೋಪಿನ
ಒಟ್ಟು ಹನ್ನೊಂದು ರಾಷ್ಟ್ರಗಳ ಪ್ರವಾಸ ಇದಾಗಿತ್ತು. ಕೊನೆಯ ದಿನ ಪ್ರತಿಯೊಬ್ಬರೂ ತಮ್ಮ ಅನುಭವ ಹಂಚಿಕೊಂಡರು. ಶ್ರೀಗಳ ಸಾನಿಧ್ಯ ಮತ್ತು ಅನುಭಾವಿಗಳೊಂದಿಗಿನ ಸಂವಾದ ಸಾವಿರಾರು ಮೈಲುಗಳ ಪಯಣದ ದಣಿವನ್ನು ಮರೆ ಮಾಚಿತು, ಇಲ್ಲಿನ ಜನರ ಐತಿಹಾಸಿಕ ಪ್ರಜ್ಞೆ ಮತ್ತು ಸಾರ್ವಜನಿಕ ಶಿಸ್ತಿನ ನಿಯಮಗಳು ನಮಗೆ ಆದರ್ಶ ಎಂದರು.