ಮೋದಿ ಭಗವಂತನ ಸ್ವರೂಪ : ಕಾಶಿನಾಥ ಸ್ವಾಮೀಜಿ

ಬೆಳಗಾವಿ 3- ಸತ್ಯ, ಧರ್ಮ, ಪ್ರಾಮಾಣಿಕತೆ, ದೇಶದ ಹಿತಕ್ಕಾಗಿ ಮನುಷ್ಯ ನಿಷ್ಠೂರರಾಗಲೇಬೇಕು. ಪ್ರಧಾನಮಂತ್ರಿ ಮೋದಿಯವರು ಜಮ್ಮು ಕಾಶ್ಮಿರದ 370 ನೇ ವಿಧಿಯನ್ನು ರದ್ದುಪಡಿಸುವ ಮೂಲಕ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಅಖಂಡ ಭಾರತವನ್ನಾಗಿ ಮಾಡಿದ್ದಾರೆ. ಎಲ್ಲ ಮಂತ್ರಿಗಳು ತಮ್ಮ ಪ್ರಮಾಣ ವಚನದಲ್ಲಿ ಅಖಂಡ ಭಾರತವನ್ನು ಎತ್ತಿ ಹಿಡಿಯುತ್ತೇನೆ ಎಂದು ಹೇಳುತ್ತಾರೆ. ಈಗ ಅಖಂಡ ಭಾರತವೆನ್ನುವುದಕ್ಕೊಂದು ಅರ್ಥ ಬಂದಿದ್ದು, ನಿಜವಾದ ಅಖಂಡ ಭಾರತವನ್ನು ಮಾಡಿರುವ ಪ್ರಧಾನಿ ಮೋದಿ ಎಂದರೆ ಒಂದು ಶಕ್ತಿ ಭಗವಂತನ ಸ್ವರೂಪವೆಂದು ಘೋಡಗೇರಿ ವಿರಕ್ತ ಮಠದ ಪೂಜ್ಯ ಕಾಶಿನಾಥ ಮಹಾಸ್ವಾಮಿಗಳು ಇಂದಿಲ್ಲಿ ಹೇಳಿದರು.

92 ನೇ ನಾಡಹಬ್ಬ  ಉತ್ಸವ ಸಮಿತಿ ಬೆಳಗಾವಿ ಇವರು ಇದೆ ದಿ.1 ರಿಂದ  ದಿ. 5 ಶನಿವಾರದವರೆ ಚನ್ನಮ್ಮ ವೃತ್ತದ ಬಳಿಯಿರುವ ಸಾಹಿತ್ಯ ಭವನ ಹೊರ ಆವರಣ ಮಂಟಪದಲ್ಲಿ ನಾಡಹಬ್ಬ ಉತ್ಸವವನ್ನು ಹಮ್ಮಿಕೊಂಡಿದ್ದಾರೆ. ಎರಡನೇ ದಿನವಾದ ಇಂದು 'ಜಮ್ಮು ಕಾಶ್ಮೀರದ 370ನೇ ವಿಧಿ ಎಂಬ ವಿಷಯದ ಗೋಷ್ಠಿಯ ಸಾನಿಧ್ಯವನ್ನು ವಹಿಸಿದ್ದ ಕಾಶಿನಾಥ ಮಹಾಸ್ವಾಮಿಗಳು ಮೇಲಿನಂತೆ ಅಭಿಪ್ರಾಯ ಪಟ್ಟರು.

ಮುಂದೆ ಮಾತನಾಡುತ್ತ ಅವರು ನಿಮ್ಮ ಓಟುಗಳನ್ನು ತಮ್ಮ ಹಿತಕ್ಕಾಗಿ ದೆಶವನ್ನು ಕೊಳ್ಳೆ ಹೊಡೆಯುವವರನ್ನು ದೂರವಿಟ್ಟು ದೇಶದ ಹಿತಕ್ಕಾಗಿ ಯಾರು ಕೆಲಸ ಮಾಡುತ್ತಾರೆಂಬುದನ್ನು ಆಳವಾಗಿ ವಿಚಾರ ಮಾಡಿ ಮತ ಚಲಾಯಿಸಿ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಉಪನ್ಯಾಸಕರಾದ ಡಾ. ಅಶೋಕ ಅಂಟೋನಿ ಡಿಸೋಜಾ ಅವರು ಮಾತನಾಡಿ ಜಮ್ಮು ಕಾಶ್ಮೀರಗಳು ಪ್ರತಿಯೊಬ್ಬ ಭಾರತೀಯನ ಶ್ರದ್ಧಾಕೆಂದ್ರಗಳಾಗಿದ್ದು ದೇಶದ ಏಕತೆಗೆ ಜಮ್ಮು ಕಾಶ್ಮಿರದ 370 ನೇ  ವಿಧಿ ರದ್ದು ಮಾಡಿದುದು ಹೆಚ್ಚು ಸಹಕಾರಿಯಾಗಿದೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಎಚ್. ಬಿ. ರಾಜಶೇಖರ 'ಜಮ್ಮು ಕಾಶ್ಮೀರದ 370 ನೇ ವಿಧಿ ಇದು ತುಂಬ ಕ್ಲಿಷ್ಟಕರ ವಿಷಯ.  ಹಾಗೇ ಈ ಕುರಿತಂತೆ ವಿಚಾರ ಮಾಡಿ ನೋಡಿದಾಗ ಇದು ಆಗಿನ ಒಂದು ಪರಿವಾರದವರು ತಮ್ಮ ಸುಖಕ್ಕಾಗಿ ಮಾಡಿಕೊಂಡಂತಹ ಒಂದು ಷಡ್ಯಂತ್ರ. 370 ನೇ ವಿಧಿಯನ್ನು ರದ್ದು ಪಡಿಸಿದ್ದರಿಂದ ಕಾಶ್ಮಿರದ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರಿಯಾಗುವುದು.  ಪ್ರತ್ಯಕವಾದ ಬಿಟ್ಟು ಎಲ್ಲರೂ ಒಂದೇ ಎಂಬ ಭಾವ ಬೆಳೆಯುವುದು ಜಮ್ಮು ಕಾಶ್ಮೀರ, ಲಡಾಕ್ ಮೂರು ಪ್ರತ್ಯೇಕತೆಯನ್ನು ಬಯಸಿದ್ದವು. ಈ ಕುರಿತಂತೆ ಸಿ. ಕೆ. ಜೋರಾಪುರ "ಪಾಕ ಸಮರ ಮತ್ತು ಭಯೋತ್ಪಾದನೆ" ಎಂಬ ಕೃತಿಯಲ್ಲಿ ಈ ಮೊದಲೇ ಬರೆದಿದ್ದಾರೆ ಎಂದು ಆ ವಿಷಯ ಕುರಿತಂತೆ ವಿವರವಾಗಿ ತಿಳಿಸಿ ಹೇಳಿದರು.

ಶ್ರೀಮತಿ ರಾಜೇಶ್ವರಿ ಹಿರೇಮಠ ಅವರು ಹಾಡಿದ ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.  ಅರವಿಂದ ಪಾಟೀಲ ಸ್ವಾಗತಿಸಿದರು. ಮೋಹನ ಗುಂಡ್ಲೂರ ವಂದಿಸಿದರು. ಸೋಮಲಿಂಗ ಬಿ. ಮಾವಿನಕಟ್ಟಿ ನಿರೂಪಿಸಿದರು. 

ಗುರುಕಾರುಣ್ಯ ನಾಟ್ಯಾಲಯದ ಕು. ಪ್ರತೀಕ್ಷಾ ಹಿರೇಮಠ ಹಾಗೂ ತಂಡದವರಿಂದ ಜಾನಪದ ನೃತ್ಯ, ಭರತನಾಟ್ಯಗಳು ಜರುಗಿದವು.

ಸಿ. ಕೆ. ಜೋರಾಪುರ, ಡಾ, ಸಿದ್ಧನಗೌಡ ಪಾಟೀಲ, ಡಾ. ಬಸವರಾಜ ಜಗಜಂಪಿ, ಶ್ರೀಮತಿ ದೀಪಿಕಾ ಚಾಟೆ, ಡಾ. ಹೇಮಾ ಸೊನೊಳ್ಳಿ, ಗುರುಗೌಡ ಪಾಟೀಲ,  ಅರವಿಂದ ಪಾಟೀಲ, ಸರಳಾ ಹೇರೇಕರ, ಡಾ. ಟಿ. ಜಿ. ಸಾಂಬ್ರೆಕರ,  ಮೀನಾಕ್ಷಿ ನೆಳಗಲಿ ಮುಂತಾದವರು  ಉಪಸ್ಥಿತರಿದ್ದರು.