ಲೇಬಗೇರಿ ಕೆರೆಯ ನರೇಗಾ ಕಾಮಗಾರಿ ಸ್ಥಳದಲ್ಲಿ ವಿಶ್ವ ಭೂ ದಿನಾಚರಣೆ
ಕೊಪ್ಪಳ 23: ದುಡಿಯುವ ವರ್ಗವಾಗಿರುವ ಶ್ರಮಿಕ ವರ್ಗದಿಂದ ಮಾತ್ರ ಭೂಮಿಯ ಉಳಿವು ಸಾಧ್ಯವೆಂದು ಕೊಪ್ಪಳದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ್ ಎಸ್. ದರಗದ ಹೇಳಿದರು.
ಅವರು ಬುಧವಾರ ಲೇಬಗೇರಿ ಗ್ರಾಮದ ಕೆರೆಯಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿ ಸ್ಥಳದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕ ಪಂಚಾಯತ ಹಾಗೂ ಲೇಬಗೇರಿ ಗ್ರಾಮ ಪಂಚಾಯತಿಯಿಂದ ಆಯೋಜಿಸಿದ್ದ ವಿಶ್ವ ಭೂ ದಿನ ಆಚರಣೆ ಕಾರ್ಯಕ್ರಮಕ್ಕೆ ಹೂವಿನಿಂದ ಅಲಂಕಾರಗೊಂಡಿರುವ ಮರಕ್ಕೆ ಪೂಜೆ ಮಾಡುವದರ ಮೂಲಕ ಚಾಲನೆ ನೀಡಿ ಮಾತನಾಡಿದರು.
1975 ರಿಂದ ಏಪ್ರೀಲ್ 22 ವಿಶ್ವ ಭೂ ದಿನವನ್ನು ಆಚರಿಸಲಾಗುತ್ತಿದ್ದು, ಭೂಮಿಯ ಉಳಿವಿನಿಂದ ಮಾತ್ರ ಮಾನವ ಸಂಕುಲ ಉಳಿಯಲು ಸಾಧ್ಯ. ಭೂಮಿಯನ್ನು ನಾವು ತಾಯಿಯ ಸ್ವರೂಪದಲ್ಲಿ ಕಾಣುತ್ತಿದ್ದು, ಭೂಮಿಯನ್ನು ನಾವು ಕಲುಷಿತವಾಗದಂತೆ ಪ್ರತಿಯೊಬ್ಬರು ಸಂರಕ್ಷಿಸಬೇಕು. ಭೂಮಿಯನ್ನು ರಕ್ಷಿಸಿ, ಪೋಷಿಸಿದಷ್ಟು ಪರಿಸರ ಸಮತೋಲನ ಕಾಪಾಡಲು ಸಹಕಾರಿಯಾಗುತ್ತದೆ. ಸಾಲು ಮರದ ತಿಮ್ಮಕ್ಕ ಸಸಿಗಳನ್ನು ಬೆಳೆಸುವದರ ಜೊತೆಗೆ ಅವುಗಳನ್ನು ತನ್ನ ಮಕ್ಕಳೆಂದು ಪೋಷಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಭೂಮಿಯ ರಕ್ಷಣೆ ಇಲ್ಲದಿರುವದರಿಂದ ವಿಶ್ವದಲ್ಲಿ ಅನೇಕ ಏರುಪೇರುಗಳು ಆಗುತ್ತಿವೆ. ಶ್ರಮಿಕ ವರ್ಗವು ಭೂಮಿ ಉಳಿವಿಗೆ ಶ್ರಮಿಸಿದಂತೆ ಉಳಿದವರು ಕೂಡಾ ಶ್ರಮಿಸುವುದಕ್ಕೆ ಕರೆ ನೀಡಿದರು.
ಭೂಮಿಯ ಮೇಲಿರುವ ಎಲ್ಲರನ್ನು ಪೋಷಣೆ ಮಾಡುವವಳು ಭೂ ತಾಯಿ. ಅತಿಯಾದ ನಗರೀಕರಣದಿಂದ ಭೂ ರಕ್ಷಣೆ ಕಷ್ಟಸಾಧ್ಯ. ಇದರಲ್ಲಿ ಶ್ರಮಿಕ ವರ್ಗದವರು ಭೂಮಿಯನ್ನು ಉಳಿವಿಕೆ ಪ್ರಮುಖ ಪ್ರಾಧಾನ್ಯತೆ ನೀಡುತ್ತಾರೆ. ಬರುವ ದಿನಮಾನಗಳಲ್ಲಿ ಪ್ರಜ್ಞಾವಂತರಾದ ನಾವುಗಳು ಭೂಮಿಯ ರಕ್ಷಣೆ, ಪೋಷಣೆ ಮಾಡಲು ಕಾರ್ಯನಿರತರಾಗಬೇಕೆಂದು ಕರೆ ನೀಡಿದರು. ಹಿಂದಿನಿಂದಲೂ ಗ್ರಾಮೀಣ ಭಾಗದಲ್ಲಿ ಮನೆಯ ಹಿರಿಯ ಭೂಮಿಗೆ ಅತಿ ಹೆಚ್ಚು ಒತ್ತು ನೀಡಿ ಭೂಮಿ ಉಳಿಸಿರುವದರಿಂದ ನಾವು ನೀವುಗಳು ಸುಖಕರವಾಗಿ ಬದುಕುತ್ತಿದ್ದೇವೆ ಎಂದರು.
ಕೊಪ್ಪಳ ತಹಶೀಲ್ದಾರ ವಿಠ್ಠಲ್ ಚೌಗಲಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ರೈತರು ಬೆಳಿಗ್ಗೆ ಎದ್ದಾಗಿನಿಂದ ಹಿಡಿದು ಮಲಗುವವರೆಗೆ ಭೂಮಿಯ ಒಂದಲ್ಲ-ಒಂದು ಚಟುವಟಿಕೆಯಲ್ಲಿ ನಿರತರಾಗಿರುತ್ತಾರೆ. ಅವರು ಭೂಮಿಗೆ ನೀಡಿರುವ ಪ್ರಾಮುಖ್ಯತೆಯಂತೆ ನಾವುಗಳು ಕೂಡಾ ಪ್ರಾಮುಖ್ಯತೆ ನೀಡಬೇಕೆಂದರು.
ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಅವರು ಮಾತನಾಡಿ, ಹಿಂದಿನ ಕಾಲದಿಂದ ಹಿಡಿದು ಪಸ್ರಸ್ತುದವರೆಗೆ ರೈತರು ಭೂಮಿಗೆ ನಮಸ್ಕರಿಸಿ ತಮ್ಮ ಮುಂದಿನ ಚಟುವಟಿಕೆಗಳಲ್ಲಿ ಕಾರ್ಯನಿರತರಾಗಿರುವದನ್ನು ನಾವು ಕಣ್ಣಾರೆ ಕಂಡಿದ್ದೆವೆ. ಅದರಂತೆ ಭೂ ರಕ್ಷಣೆಗೆ ನಾವು ಕೂಡಾ ಆದ್ಯತೆ ನೀಡಬೇಕು. ಭೂಮಿಯ ಮಡಿಲಲ್ಲಿ ನಾವು ಚೆನ್ನಾಗಿ ಜೀವನ ಸಾಗಿಸಬೇಕಾದರೆ, ಭೂಮಿ ರಕ್ಷಣೆ, ಪೋಷಣೆ ಕೂಡಾ ಅಷ್ಟೆ ಮುಖ್ಯವಾಗಿದೆ ಎಂದರು.
ಸಸಿ ನೆಡುವ ಕಾರ್ಯಕ್ರಮ ್ಘ ಆರೋಗ್ಯ ತಪಾಸಣೆ: ಕೆರೆಯ ಆವರಣದಲ್ಲಿ ಸಿವಿಲ್ ನ್ಯಾಯಾಧೀಶರು ಸಸಿಗಳನ್ನು ನೆಟ್ಟು ನೀರು ಉಣಿಸಿದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲಾ ನರೇಗಾ ಕೂಲಿಕಾರರಿಗೆ ಆರೋಗ್ಯ ಇಲಾಖೆ ಸಿಬ್ಬಂದಿಗಳಿಂದ ಆರೋಗ್ಯ ತಪಾಸಣೆ ಜರುಗಿಸಿ ಬಿಪಿ, ಶುಗರ್ ಮತ್ತು ಸಣ್ಣ ಪುಟ್ಟ ಖಾಯಿಲೆಗಳಾದ ಜ್ವರ, ಕೆಮ್ಮ, ನೆಗಡಿ, ತಲೆನೋವು ಇತ್ಯಾದಿಗಳಿಗೆ ಮಾತ್ರ ನೀಡಲಾಯಿತು. ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ಕಾರ್ಯದರ್ಶಿ ಪೂಣೆಂರ್ದ್ರಸ್ವಾಮಿ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ದೇವಮ್ಮ ಮಹಾದೇವಪ್ಪ ಕುರಿ, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಮಹೇಶ್, ಗ್ರಾಮ ಪಂಚಾಯತಿ ಸದಸ್ಯರಾದ ಫಕೀರಗೌಡ ಗೌಡ್ರ, ನಾಗಪ್ಪ ದೊಡ್ಡಮನಿ, ಬಸವರಾಜ ಯತ್ನಟ್ಟಿ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ಪಂಚಾಯತ ಅಭಿವೃದ್ಧಿ ಅಧಿಕಾರಿ ಸಂಗಮೇಶ ತೇರಿನ, ತಾಂತ್ರಿಕ ಸಂಯೋಜಕ ಯಮನೂರ, ಗ್ರಾಮ ಪಂಚಾಯತಿ ಕಾರ್ಯದರ್ಶಿ ಪೂಣೆಂರ್ದ್ರಸ್ವಾಮಿ, ಸಮುದಾಯ ಆರೋಗ್ಯ ಸುರಕ್ಷಾಧಿಕಾರಿ ಸರೋಜಿನಿ, ತಾಂತ್ರಿಕ ಸಹಾಯಕ ಮಂಜುನಾಥ ಮಾದಾಪುರ ಸೇರಿದಂತೆ ಆಶಾ ಕಾರ್ಯಕರ್ತೆಯರು, ಕೂಲಿಕಾರರು, ಗ್ರಾಮ ಪಂಚಾಯತ ಸಿಬ್ಬಂದಿಗಳು ಹಾಜರಿದ್ದರು.