ತಿರಂಗಾ ಯಾತ್ರೆ ಹಮ್ಮಿಕೊಂಡಿದ್ದು: ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕಿ ರತ್ನಾ ಮಾಮನಿ

Tiranga Yatra organized by: DCC Bank Director Ratna Mamani

ತಿರಂಗಾ ಯಾತ್ರೆ ಹಮ್ಮಿಕೊಂಡಿದ್ದು: ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕಿ ರತ್ನಾ ಮಾಮನಿ 

ಸವದತ್ತಿ 18: ನಮ್ಮ ದೇಶದ ಸೈನಿಕರಿಗೆ ನೈತಿಕ ಬೆಂಬಲ ಹಾಗೂ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಪಟ್ಟಣದಲ್ಲಿ ಪಕ್ಷಾತೀತವಾಗಿ ತಿರಂಗಾ ಯಾತ್ರೆ ಹಮ್ಮಿಕೊಂಡಿದ್ದು, ಯಾತ್ರೆಯಲ್ಲಿ ಪಕ್ಷಾತೀತವಾಗಿ ಸಾರ್ವಜನಿಕರು ಪಾಲ್ಗೊಳ್ಳಬೇಕೆಂದು ಬಿಜೆಪಿ ಮಂಡಲ ಅಧ್ಯಕ್ಷ ವಿರೂಪಾಕ್ಷ ಮಾಮನಿ ಮನವಿ ಮಾಡಿದರು. ಇಲ್ಲಿನ ಮಾಮನಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ತಿರಂಗಾ ಯಾತ್ರೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮೇ.20 ಮಂಗಳವಾರ ರಂದು ನಡೆಯುವ ತಿರಂಗಾ ಯಾತ್ರೆ ಇಲ್ಲಿನ ಎಪಿಎಂಸಿ ವೃತ್ತದಿಂದ ಬೆಳಿಗ್ಗೆ 10.30 ಕ್ಕೆ ಆರಂಭವಾಗಿ ಮಾಮನಿ ಕಲ್ಯಾಣ ಮಂಟಪವರೆಗೂ ನಡೆಯಲಿದೆ. ಪಕ್ಷತೀತವಾಗಿ ನಡೆಯುವ ಈ ಯಾತ್ರೆಯಲ್ಲಿ ಪಕ್ಷದ ಯಾವುದೇ ಬ್ಯಾನರ್‌ಗಳು ಇರುವುದಿಲ್ಲ.ಪಾಕಿಸ್ತಾನದ ಭಯೋತ್ಪಾದಕರಿಗೆ ಮತ್ತು ಪಾಕಿಸ್ತಾನಕ್ಕೆ ಬುದ್ಧಿ ಕಲಿಸಿರುವ ನಮ್ಮ ಸೈನಿಕರಿಗೆ ಗೌರವ ನೀಡುವ ಸಲುವಾಗಿ ಈ ತಿರಂಗಾ ಯಾತ್ರೆಯನ್ನು ಕೈಗೊಳ್ಳಲಾಗಿದ್ದು, ವೈದ್ಯರು, ಎಂಜಿನಿಯರ್‌ಗಳು, ವಿದ್ಯಾರ್ಥಿಗಳು, ನಿವೃತ್ತ ಸೈನಿಕರು, ರೈತರು, ಕಾರ್ಮಿಕರು ಸೇರಿ ಯಾತ್ರೆಯಲ್ಲಿ ಎಲ್ಲ ಸಂಘಟನೆಯವರು ಪಾಲ್ಗೊಳ್ಳಬೇಕೆಂದು ಕರೆ ನೀಡಿದರು. 

ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕಿ ರತ್ನಾ ಮಾಮನಿ ಮಾತನಾಡಿ, ಭಾರತದ ತಾಯಂದಿರ ಸಿಂದೂರ ಅಳಿಸಿದರೆ ಏನು ಆಗುತ್ತದೆ ಎಂಬುದನ್ನು ನಮ್ಮ ಸೇನೆಯು ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿದೆ ಮತ್ತು ಪಾಕಿಸ್ತಾನಕ್ಕೆ ಬುದ್ಧಿ ಕಲಿಸಿದೆ. ಸುಮಾರು 100ಕ್ಕೂ ಹೆಚ್ಚು ಭಯೋತ್ಪಾದಕರು ಹತರಾಗಿದ್ದಾರೆ. ಪಾಕಿಸ್ತಾನದ ಉಗ್ರರ ಸ್ಥಳಗಳನ್ನು ಈಗಾಗಲೇ ಧ್ವಂಸಗೊಳಿಸಲಾಗಿದೆ. ಪಾಕಿಸ್ತಾನವು ಕೊನೆಗೆ ಈ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಅಂಗಲಾಚುವ ಸ್ಥಿತಿಗೆ ನಮ್ಮ ಸೈನಿಕರು ತಂದಿದ್ದಾರೆ. ಭಾರತ ಎಂದೂ ಉಗ್ರವಾದವನ್ನು ಸಹಿಸಲ್ಲ ಅನ್ನುವ ಸಂದೇಶವನ್ನು ಇಡೀ ಪ್ರಪಂಚಕ್ಕೆ ನೀಡಿದ್ದಾರೆ ಎಂದರು.ಈ ವೇಳೆ ಎಫ್‌.ಎಸ್‌.ಸಿದ್ದನಗೌಡ್ರ, ಮಲ್ಲಿಕಾರ್ಜುನ ಮಾದಮ್ಮನವರ, ಬಸವರಾಜ ಕಾರದಗಿ, ಜಗದೀಶ ಶಿಂತ್ರಿ, ಈರಣ್ಣ ಚಂದರಗಿ, ಜಗದೀಶ ಕೌಜಗೇರಿ, ಪುಂಡಲೀಕ ಮೇಟಿ, ಡಾ.ನಯನಾ ಭಸ್ಮೆ, ಸಿ.ಬಿ. ದೊಡಗೌಡರ, ಉದಯ ಹೂಗಾರ, ಮಲ್ಲು ಬೀಳಗಿ ಹಾಗೂ ಮಾಜಿ ಸೈನಿಕರು, ಪ್ರಮುಖರು, ಕಾರ್ಯಕರ್ತರು ಇದ್ದರು.