ತ್ರಿಕೋನ ಸರಣಿ: ಭಾರತ ವನಿತೆಯರಿಗೆ 5 ವಿಕೆಟ್ ಜಯ

ಕ್ಯಾನ್ ಬೆರಾ, ಜ 31, ಹರ್ಮನ್ ಪ್ರೀತ್ ಕೌರ್ (42 ರನ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ಮಹಿಳಾ ತಂಡ ತ್ರಿಕೋನ ಸರಣಿಯ ಮೊದಲನೇ ಟಿ-20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಐದು ವಿಕೆಟ್ ಗಳ ಜಯ ಸಾಧಿಸಿತು.ಇಲ್ಲಿನ ಮುನುಕಾ ಓವಲ್ ಅಂಗಳದಲ್ಲಿ ಇಂಗ್ಲೆಂಡ್ ನೀಡಿದ 148 ರನ್ ಗುರಿ ಹಿಂಬಾಲಿಸಿದ ಭಾರತಕ್ಕೆ ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂದಾನ ಜೋಡಿಯು ಮೊದಲನೇ ವಿಕೆಟ್ ಗೆ 27 ರನ್ ಗಳಿಸಿತು. ಈ ಜೋಡಿಯಿ ತಂಡವನ್ನು ಉತ್ತಮವಾಗಿ ಮುನ್ನಡೆಸುತ್ತಿತ್ತು. ಆದರೆ, 15 ರನ್ ಗಳಿಸಿ ಆಡುತ್ತಿದ್ದ ಸ್ಮೃತಿ ಮಂಧಾನ ಅವರನ್ನು ಸೀವಿಯರ್ ಔಟ್ ಮಾಡಿದರು.  ಬಳಿಕ 25 ಎಸೆತಗಳಲ್ಲಿ 30 ರನ್ ಗಳಿಸಿ ಶೆಫಾಲಿ ವರ್ಮಾ ಕೂಡ ವಿಕೆಟ್ ಒಪ್ಪಿಸಿದರು. 

ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡಿದ ನಾಯಕಿ ಹರ್ಮನ್ ಪ್ರೀತ್ ಕೌರ್ ಇಂಗ್ಲೆಂಡ್ ಬೌಲರ್ ಗಳನ್ನು ಸಮರ್ಥವಾಗಿ ದಂಡಿಸಿದರು. ಇವರು 34 ಎಸೆತಗಳಲ್ಲಿ 42 ರನ್ ಗಳಿಸಿ ತಂಡವನ್ನು ಇನ್ನೂ ಮೂರು ಎಸೆತಗಳು ಬಾಕಿ ಇರುವಂತೆ ಗೆಲುವಿನ ದಡ ಸೇರಿಸಿದರು. ಜೆಮಿಮಾ ರೋಡ್ರಿಗಸ್ 26 ರನ್ ಗಳಿಸಿ ತಂಡಕ್ಕೆ ಅಲ್ಪ ಕಾಣಿಕೆ ನೀಡಿದರು. ಕೊನೆಯಲ್ಲಿ ನಾಯಕಿಗೆ ಸಾಥ್ ನಿಡಿದ್ದ ದೀಪ್ತಿ ಶರ್ಮಾ 12 ರನ್ ಗಳಿಸಿ ಅಜೇಯರಾಗಿ ಉಳಿದರು. ಒಟ್ಟಾರೆ, ಭಾರತ 19.3 ಓವರ್ ಗಳಿಗೆ ಐದು ವಿಕೆಟ್ ಕಳೆದುಕೊಂಡು 150 ರನ್ ಗಳಿಸಿ ಗೆಲುವಿನ ದಡ ಸೇರಿತು.

ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ವನಿತೆಯರು ನಿಗದಿತ 20 ಓವರ್ ಗಳಿಗೆ 7 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತು. ಇಂಗ್ಲೆಂಡ್ ಪರ ನಾಯಕಿ ಹೇದರ್ ನೈಟ್ 44 ಎಸೆಗಳಲ್ಲಿ 67 ರನ್ ಸಿಡಿಸಿದರು. ಟಾಮಿ ಬಿಮೌಂಟ್ 37 ರನ್ ಚಚ್ಚಿದ್ದರು. ಭಾರತದ ಪರ ರಾಜೇಶ್ವರಿ ಗಾಯಕ್ವಾಡ್, ಶಿಖಾ ಪಾಂಡೆ ಹಾಗೂ ದೀಪ್ತಿ ಶರ್ಮಾ ಎರಡು ವಿಕೆಟ್ ಪಡೆದರು.

  ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್ (ಮ): 20 ಓವರ್ ಗಳಿಗೆ 147/7 (ಹೇದರ್ ನೈಟ್ 67, ಟಾಮಿ ಬಿಮೌಂಟ್ 37: ರಾಜೇಶ್ವರಿ ಗಾಯಕ್ವಾಡ್ 19 ಕ್ಕೆ 2, ಶಿಖಾ ಪಾಂಡೆ 33 ಕ್ಕೆ 2, ದೀಪ್ತಿ ಶರ್ಮಾ 30 ಕ್ಕೆ 2) ಭಾರತ (ಮ): 19.3 ಓವರ್ ಗಳಿಗೆ 150/5 (ಹರ್ಮನ್ ಪ್ರೀತ್ ಕವರ್ 42, ಜೆಮಿಮಾ ರೊಡ್ರಿಗಸ್ 26, ಶೆಫಾಲಿ ವರ್ಮಾ 30; ಕಥೆರಿನ್ ಬ್ರಂಟ್ 33 ಕ್ಕೆ 2)