ಅಸಂಘಟಿತ ವರ್ಗದವರು ಸರ್ಕಾರಿ ಸೌಲಭ್ಯ ಪಡೆಯಿರಿ: ನ್ಯಾ. ಮಹಾಂತೇಶ್ ದರಗದ

Unorganized sections should get government benefits: Justice Mahantesh Daragad

ದನಕನದೊಡ್ಡಿ ಕೆರೆಯ ಹೂಳೆತ್ತುವ ಸ್ಥಳದಲ್ಲಿ ಕೂಲಿಕಾರರಿಗೆ ಕಾನೂನು ಅರಿವು-ನೆರವು 

ಕೊಪ್ಪಳ  28:  ಅಸಂಘಟಿತ ವರ್ಗಗಳಿಗೆ ಸರ್ಕಾರದಿಂದ ಅನೇಕ ಸೌಲಭ್ಯಗಳಿದ್ದು, ಅವುಗಳನ್ನು ಪಡೆಯಲು ಮುಂದಾಗುವಂತೆ ಕೊಪ್ಪಳದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ್ ಎಸ್‌. ದರಗದ ಹೇಳಿದರು. 

ಅವರು ಬುಧವಾರ ಕೊಪ್ಪಳ ತಾಲ್ಲೂಕಿನ ಕಲ್ಲತಾವರಗೇರಾ ಗ್ರಾಮ ಪಂಚಾಯತಿ ವ್ಯಾಪ್ತಿಯ ದನಕನದೊಡ್ಡಿ ಗ್ರಾಮದ ಕೆರೆಯ ಕಾಮಗಾರಿ ಸ್ಥಳದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕ ಪಂಚಾಯತ ಹಾಗೂ ಕಲ್ಲತಾವರಗೇರಾ ಗ್ರಾಮ ಪಂಚಾಯತಿಯಿಂದ ಆಯೋಜಿಸಿದ್ದ ಅಸಂಘಟಿತ ವರ್ಗಗಳಿಗೆ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.  

ದೇಶದ ಆರ್ಥಿಕತೆ ದುಡಿಯುವ ವರ್ಗಗಳ ಮೇಲೆ ನಿಂತಿದೆ. ಅಸಂಘಟಿತ ವರ್ಗಗಳಿಗೆ ಸಾಕಷ್ಟು ದುಡಿಮೆ ಇದ್ದಲ್ಲಿ ಉತ್ತಮವಾಗಿ ಕುಟುಂಬ ನಿರ್ವಹಣೆಗೆ ಸಾಧ್ಯವಾಗುತ್ತದೆ. ದೇಶ ಅಭಿವೃದ್ಧಿಯತ್ತ ಸಾಗಿದರೆ ಅದರಲ್ಲಿ ಅಸಂಘಟಿತ ವರ್ಗಗಳ ಪಾತ್ರವು ಬಹು ಮುಖ್ಯವಾಗಿರುತ್ತದೆ. ಅಸಂಘಟಿತ ವರ್ಗದವರಿಗೆ ಸರ್ಕಾರದಿಂದ ಅನೇಕ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ಪಡೆಯುವಂತೆ ಕರೆ ನೀಡಿದರು.  

ಅಸಂಘಟಿತ ವರ್ಗದವರಿಗೆ ಕಾನೂನಿನ ಅರಿವು ಮತ್ತು ನೆರವು ನೀಡುವ ಉದ್ದೇಶದಿಂದ ಈ ದಿನ ಕಾರ್ಯಕ್ರಮ ಆಯೋಜಿಸಲಾಗಿದೆ. ದುಡಿಮೆ ದೇವರು ಎನ್ನುವ ಕಲ್ಪನೆ ಹೊಂದಿರುವ ಶ್ರಮಿಕ ವರ್ಗ, ಕೆಲಸಕ್ಕೆ ಸೀಮಿತವಾಗಿರದೇ ಕೆಲಸದ ಜೊತೆಗೆ ಸರ್ಕಾರಿ ಸೌಲಭ್ಯಗಳನ್ನು ಪಡೆಯುವದು ಅವರ ಹಕ್ಕಾಗಿದೆ ಎಂದರು.  

ಕೊಪ್ಪಳ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಅವರು ಮಾತನಾಡಿ, ಕೂಲಿಕಾರರು ಸಾಮುದಾಯಿಕ ಕಾಮಗಾರಿಯಲ್ಲಿ ಕೆಲಸಕ್ಕೆ ಹಾಜರಾಗುವದರ ಜೊತೆಗೆ ವೈಯಕ್ತಿಕ ಕಾಮಗಾರಿಗಳಾದ ದನದಶೆಡ್, ಮೆಕೆಶೆಡ್, ಕೋಳಿಶೆಡ್, ಹಂದಿಶೆಡ್ ಮತ್ತು ತೋಟಗಾರಿಕೆ, ರೇಷ್ಮೆ ಕಾಮಗಾರಿಗಳನ್ನು ಅನುಷ್ಠಾನಿಸಲು ಅವಕಾಶ ಇರುವದರಿಂದ ಅವುಗಳಿಗೆ ಕೂಡಾ ಹೆಚ್ಚು ಆದ್ಯತೆ ನೀಡಿ ಅನುಷ್ಠಾನಿಸಿದಲ್ಲಿ ಆರ್ಥಿಕ ಸದೃಡರಾಗಬಹುದೆಂದರು.  

ಕಾರ್ಮಿಕ ಇಲಾಖೆಯ ನೀರೀಕ್ಷಕಿ ಮಂಜುಳಾ ಅವರು ಮಾತನಾಡಿ, ಎಲ್ಲಾ ನರೇಗಾ ಕೂಲಿಕಾರರು ಕಟ್ಟಡ ಕಾರ್ಮಿಕರಾಗಿರುವದಿಲ್ಲ. ಗೌಂಡಿ ಕೆಲಸ, ಟೆಲರೀಂಗ್ ಎಲೆಕ್ಟ್ರಿಯಷನ್ ಇತ್ಯಾದಿ ಒಟ್ಟು 91 ವರ್ಗದವ ಕೆಲಸ ನಿರ್ವಹಿಸುವ ಎಲ್ಲರೂ ಕಾರ್ಮಿಕ ಇಲಾಖೆಯಲ್ಲಿ ನೊಂದಣಿ ಮಾಡಿಕೊಂಡಲ್ಲಿ ಅವರಿಗೆ ಅಪಘಾತವಾಗಿ ಶಾಶ್ವತ ಅಂಗವಿಕಲತೆ ಹೊಂದಿದಲ್ಲಿ ಮತ್ತು ಮರಣ ಹೊಂದಿದರೆ ಸರ್ಕಾರದಿಂದ ಪರಿಹಾರ ಧನ ಒದಗಿಸಲು ಅವಕಾಶ ಇರುತ್ತದೆ ಎಂದರು.  

ತಾಲೂಕ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶರಣಪ್ಪ ಅವರು ಮಾತನಾಡಿ ಸಮಾಜ ಕಲ್ಯಾಣ ಇಲಾಖೆಯಿಂದ ಎಸ್‌.ಸಿ ಮತ್ತು ಎಸ್‌.ಟಿ ಕುಟುಂಬಗಳ ಮಕ್ಕಳಿಗೆ ವಿದ್ಯಾರ್ಥಿ ವೇತನ, ವಸತಿ ನಿಲಯ ಸೌಲಭ್ಯ ಮತ್ತು ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಮೂಲಭೂತ ಸೌಕರ್ಯ ಒದಗಿಸಲು ಅವಕಾಶ ಇರುತ್ತದೆ ಎಂದರು.  

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗಂಗಪ್ಪ ನಾಯಕ, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಮಹೇಶ್, ಗ್ರಾ.ಪಂ ಸದಸ್ಯರಾದ ರವಿಕುಮಾರ ಒಂಟಿಗಾರ, ಪಾರಮ್ಮ ಕೊಳ್ಳಿ, ಶಾಂತಮ್ಮ ಬಸವರಾಜ ಪಂಚಾಯತ ಅಭಿವೃದ್ಧಿ ಅಧಿಕಾರಿ ಯಮನೂರ​‍್ಪ ಕಬ್ಬಣನವರ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ಸಮುದಾಯ ಆರೋಗ್ಯ ಸುರಕ್ಷಾಧಿಕಾರಿ ಫಾಮಿದಾ, ಶಬ್ಬೀರ್, ತಾಂತ್ರಿಕ ಸಹಾಯಕ ಮಂಜುನಾಥ ಮಾದಾಪುರ ಮತ್ತು ಗ್ರಾ.ಪಂ ಕರವಸೂಲಿಗಾರ ನಾಗರಾಜ ಸೇರಿಂದತೆ ಇತರೆ ಸಿಬ್ಬಂದಿಗಳು ಹಾಜರಿದ್ದರು. 

ಸಿವಿಲ್ ನ್ಯಾಯಾಧೀಶರು ಸಸಿಗಳನ್ನು ನೆಟ್ಟು ನೀರು ಉಣಿಸಿದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲಾ ನರೇಗಾ ಕೂಲಿಕಾರರಿಗೆ ಆರೋಗ್ಯ ಇಲಾಖೆ ಸಿಬ್ಬಂದಿಗಳಿಂದ ಆರೋಗ್ಯ ತಪಾಸಣೆ ಜರುಗಿಸಲಾಗಿತು.