ವಿಜಯಪುರ: ದಾಖಲೆ ರಹಿತ ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ರೂಪಿಸಲು ಸಲಹೆ

ಲೋಕದರ್ಶನ ವರದಿ

ವಿಜಯಪುರ 17: ಜಿಲ್ಲೆಯಲ್ಲಿರುವ ದಾಖಲೆ ರಹಿತ ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ರೂಪಿಸಿ ಅಲ್ಲಿಯ ನಿವಾಸಿಗಳಿಗೆ ಹಕ್ಕು ಪತ್ರ ನೀಡುವ ಕುರಿತಂತೆ ನಿಗದಿತ ಕಾಯಿದೆಗಳ ಅನ್ವಯ ಪ್ರಸ್ತಾವನೆ ಸಿದ್ಧಪಡಿಸುವಂತೆ ಕಂದಾಯ ಗ್ರಾಮ ರಚನಾ ಘಟಕದ ನಿರ್ದೇಶಕರು ಹಾಗೂ ಕಂದಾಯ ಇಲಾಖೆಯ ನಿವೃತ್ತ ವಿಶೇಷ ಕಾರ್ಯದರ್ಶಿಗಳಾದ ಶ್ರೀ ಬಿ. ಹೀರಾ ನಾಯಕ ತಿಳಿಸಿದರು.

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಇಂದು ಕಂದಾಯ ಗ್ರಾಮಗಳ ರಚನಾ ಕೋಶ ಬೆಂಗಳೂರು, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ವತಿಯಿಂದ ಹೊಸ ಕಂದಾಯ ಗ್ರಾಮಗಳ ರಚನೆ ಕುರಿತು ತಹಶೀಲ್ಧಾರರು, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳಿಗೆ, ಕಂದಾಯ ಇಲಾಖಾ ಸಿಬ್ಬಂದಿಗಳಿಗೆ ಏರ್ಪಡಿಸಲಾಗಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.

ರಾಜ್ಯದಲ್ಲಿ ನೆಲೆಗೊಂಡಿರುವ ಜನವಸತಿಗಳ ಪೈಕಿ ಹಲವು ಲಂಬಾಣಿ ತಾಂಡಾ, ಗೊಲ್ಲರಹಟ್ಟಿ, ಹಾಡಿ, ಮಜರೆ ಇತ್ಯಾದಿ ಹೆಸರುಗಳಿಂದ ಗುರುತಿಸಲ್ಪಡುವ ದಾಖಲೆ ರಹಿತ ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಹಾಗೂ ಕಂದಾಯ ಗ್ರಾಮದ ಭಾಗವಾಗಿ ಪರಿವರ್ತಿಸಿ ಅಲ್ಲಿಯ ನಿವಾಸಿಗಳಿಗೆ ವಾಸ್ತವ್ಯದ ಹಕ್ಕು ದಾಖಲೆಗಳನ್ನು ಒದಗಿಸುವ ಕುರಿತಂತೆ ಸೂಕ್ತ ಕಾಯಿದೆಗಳು, ನಿಯಮಾವಳಿ ಹಾಗೂ ಸಕರ್ಾರದ ನಿರ್ದೇಶನದನ್ವಯ ರೂಪಸುವ ಕುರಿತಂತೆ ಪ್ರಸ್ತಾವನೆಗಳನ್ನು ವ್ಯವಸ್ಥಿತ ರೀತಿಯಲ್ಲಿ ಸಿದ್ಧಪಡಿಸುವಂತೆ ಅವರು ಸಲಹೆ ನೀಡಿದರು.

ಸರ್ಕಾರವು ದಾಖಲೆ ರಹಿತ ಜನವಸತಿಗಳನ್ನು ಗ್ರಾಮದ ಭಾಗ ಅಥವಾ ಬಡಾವಣೆ ಹಾಗೂ ಉಪಗ್ರಾಮ ರೂಪಿಸಲು ಹಾಗೂ ಸ್ವತಂತ್ರ ಕಂದಾಯ ಗ್ರಾಮ ಎಂದು ಪರಿವರ್ತಿಸಲು ಅಧಿಸೂಚನೆಗಾಗಿ ಪ್ರಸ್ತಾವನೆಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವ ಜೊತೆಗೆ ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಸಮಗ್ರ ಪ್ರಸ್ತಾವನೆ ಅನ್ವಯ ಸೂಕ್ತ ಅಧಿಸೂಚನೆ ಹೊರಡಿಸಲಾಗುತ್ತಿದ್ದು, ಆಯಾ ತಹಶೀಲ್ಧಾರರು, ಭೂದಾಖಲೆಗಳ ಅಧಿಕಾರಿಗಳು, ನಿಯಮಾವಳಿ ಅನ್ವಯ ಪರಿಶೀಲನೆ ನಡೆಸಿ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು 7 ನೇ ಆರ್ಥಿಕ ಗಣತಿಗೆ ಸಂಬಂಧಪಟ್ಟಂತೆ ಮೊಬೈಲ್ ಆಪ್ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪ್ರಸನ್ನ ಹಾಗೂ ಇತರರು ಉಪಸ್ಥಿತರಿದ್ದರು.