ವಿಜಯಪುರ 18: ''ಬಾನಂಗಳದಲ್ಲಿ ಮೂಡಿದ ಬಣ್ಣ-ಬಣ್ಣದ ಚಿತ್ತಾರಗಳು, ಆಕಾಶದಿಂದ ಸುರಿದ ಬೆಳಕಿನ ಮಳೆೆ, ಕಿವಿಗಡಚಿಕ್ಕುವ ಭಾರೀ ಸದ್ದಿನೊಂದಿಗೆ ಭುವಿಯಿಂದ ಒಂದರ ಹಿಂದೊಂದು ನಭೋ ಮಂಡಲಕ್ಕೆ ಚಿಮ್ಮುತ್ತಿದ್ದ ರಾಕೇಟ್ಗಳು'
ಶ್ರೀ ಸಿದ್ಧೇಶ್ವರ ಸಂಕ್ರಮಣ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ರಾತ್ರಿ ನಗರದ ಡಾ.ಬಿ.ಆರ್. ಅಂಬೇಡ್ಕರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಮದ್ದು ಸುಡುವ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯಗಳಿವು.
ಮದ್ದು ಸುಡುವ ಕಾರ್ಯಕ್ರಮ ವೀಕ್ಷಿಸಲು ಕ್ರೀಡಾಂಗಣದಲ್ಲಿ ಸೇರಿದ್ದ ಲಕ್ಷಾಂತರ ಜನರು ಬೆಳಕಿನ ದೃಶ್ಯ ವೈಭವವನ್ನು ಕಂಡು ಬೆರಗಾಗಿ ಹೋದರು. ಭುವಿಯಿಂದ ಶರವೇಗದಲ್ಲಿ ಭಾರೀ ಸದ್ದಿನೊಂದಿಗೆ ಚಿಮ್ಮುತ್ತಿದ್ದ ರಾಕೇಟ್(ಸಿಡಿಮದ್ದು)ಗಳು ನೀಲಾಕಾಶದಲ್ಲಿ ಮೂಡಿಸುತ್ತಿದ್ದ ಬಣ್ಣದ ಚಿತ್ತಾರಗಳು ನೋಡುಗರ ಮನಸೂರೆಗೊಂಡವು.
ರಾಕೇಟ್ಗಳು ಢಂ.ಢಂ.. ಸದ್ದು ಮಾಡುತ್ತ ಒಂದರ ಹಿಂದೊಂದು ಆಕಾಶಕ್ಕೆ ಚಿಮ್ಮುತ್ತ ಬಣ್ಣ-ಬಣ್ಣದ ಚಿತ್ತಾರ ಮೂಡಿಸುತ್ತಿದ್ದಂತೆ ಕ್ರೀಡಾಂಗಣದ ತುಂಬೆಲ್ಲ ಪ್ರೇಕ್ಷಕರಿಂದ ಹಷೋದ್ಘಾರ ತೇಲಿ ಬರುತಿತ್ತು. ಬೆಳಕಿನ ದೃಶ್ಯ ವೈಭವ ಕಂಡು ಮಕ್ಕಳು ಯುವಕರು ಕುಣಿದು ಕುಪ್ಪಳಿಸಿದರು.
ಬೆಳಕಿನ ಬಣ್ಣದ ಚಿತ್ತಾರವನ್ನು ಪ್ರೇಕ್ಷಕರು ಮೊಬೈಲ್ ಕೆಮೆರಾದಲ್ಲಿ ಸೆರೆ ಹಿಡಿಯುತ್ತಿದ್ದ ದೃಶ್ಯ ಸಾಮನ್ಯವಾಗಿತ್ತು.
ಶ್ರೀ ಸಿದ್ದೇಶ್ವರ ಮಂದಿರ, ದಬದಬಾ, ಅಗಸಿ ಬಾಗಿಲು, ಶ್ರೀಚಕ್ರ, ತ್ರಿಚಕ್ರ, ಓಂ ಬೋಡರ್್, ಮ್ಯಾಜಿಕ್ ಟ್ರೀ, ರೋಮನ್ ರೌಂಡ್ ಕ್ಯಾಲೆಂಡರ್, ಕ್ರ್ಯಾಕಲಿಂಗ್, ರಾಜ ದರ್ಬಾರ್, ಸನ್ ರೈಸ್, ಸ್ವಾಗತ ಕಮಾನು, ನಯಾಗಾರಾ ಫಾಲ್ಸ್, ಸೂರ್ಯಚಕ್ರ, ಪೃಥ್ವಿಚಕ್ರ, ಬಿಗ್ ಪ್ಲಾವರ್ ಸೇರಿದಂತೆ ವಿವಿಧ ಆಕೃತಿಗಳು ಬೆಳಕಿನಲ್ಲಿ ಕಂಗೊಳಿಸಿದವು.
ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ನಡೆದ ಚಿತ್ತಾಕರ್ಷಕ ಮದ್ದು ಸುಡುವ ಕಾರ್ಯಕ್ರಮ ಜನರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ಇಡೀ ಕ್ರೀಡಾಂಗಣ ಜನರಿಂದ ತುಂಬಿ ತುಳುಕುತ್ತಿತ್ತು. ಸಾಲದ್ದಕ್ಕೆ ಕ್ರೀಡಾಂಗಣದ ಹೊರಗೆ ರಸ್ತೆಯ ಮೇಲೆ, ಹಾಗೂ ಕಟ್ಟಡಗಳ ಮೇಲೆ ನಿಂತು ಜನರು ಮದ್ದು ಸುಡುವ ಕಾರ್ಯಕ್ರಮ ವೀಕ್ಷಿಸಿ ಖುಷಿಪಟ್ಟರು.
ಜಿಲ್ಲಾ ಸ್ತುವಾರಿ ಸಚಿವ ಸಿ.ಸಿ. ಪಾಟೀಲ, ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷರು, ವಿಜಯಪುರ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಎಸ್ಪಿ ಪ್ರಕಾಶ ನಿಕ್ಕಂ ಅವರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬೆಳಕಿನ ವೈಭವವನ್ನು ಕಣ್ತುಂಬಿಕೊಂಡರು.