ವಿಜಯಪುರ: ಎಬಿವ್ಹಿಪಿ ವಿದ್ಯಾರ್ಥಿ ಸಂಘಟನೆ ಅಲ್ಲ ವೈಚಾರಿಕ ಆಂದೋಲನ

ಲೋಕದರ್ಶನ ವರದಿ

ವಿಜಯಪುರ 28: ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ಕೇವಲ ವಿದ್ಯಾರ್ಥಿ  ಸಂಘಟನೆ ಅಷ್ಟೇ ಅಲ್ಲ, ಅದೊಂದು ವೈಚಾರಿಕ ಆಂದೋಲನ ಎಂದು ಎಬಿವಿಪಿ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಬಿ.ವಿ. ವಸಂತಕುಮಾರ ಹೇಳಿದರು.

ನಗರದ ರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿ ಹಮ್ಮಿಕೊಂಡಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ಪ್ರಾಂತ ಅಭ್ಯಾಸ ವರ್ಗಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಅಖಿಲ ಭಾರತೀಯ ವಿದ್ಯಾರ್ಥಿ  ಪರಿಷತ್ ವಿದ್ಯಾರ್ಥಿ-ಯುವಜನರಲ್ಲಿ ಸದ್ವಿಚಾರ, ದೇಶಭಕ್ತಿ ಹಾಗೂ ಉದಾತ್ತ ವೈಚಾರಿಕ ಚಿಂತನೆಗಳನ್ನು ಬಿತ್ತುವ ಸಂಘಟನೆಯಾಗಿದ್ದು, ವಿದ್ಯಾರ್ಥಿ ಸಂಘಟನೆಯ ಜೊತೆಗೆ ವೈಚಾರಿಕ ಆಂದೋಲನ ಕೂಡಾ ಆಗಿದೆ ಎಂದರು.

ಬಂದೂಕು, ಪರಮಾಣು ಬಾಂಬ್, ಅತ್ಯಾಧುನಿಕ ಶಸ್ತ್ರಾಸ್ತ್ರ, ಡಾಲರ್ ಬಲದಿಂದ ಜಗತ್ತನ್ನು ಆಳಲು ಸಾಧ್ಯವಿಲ್ಲ. ಅರಿವು ಹಾಗೂ ವಿಚಾರದಿಂದ ಮಾತ್ರ ಜಗತ್ತನ್ನು ಆಳಲು ಸಾಧ್ಯ ಎಂದರು. ಸ್ವಚ್ಛ ಮನಸ್ಸು ನಿರ್ಮಾಣಗೊಂಡರೆ  ಮಾತ್ರ ಸ್ವಚ್ಛ ಭಾರತ ರೂಪುಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ಮನಸ್ಸುಗಳು ಮೊದಲು ಸ್ವಚ್ಛಗೊಳ್ಳಬೇಕು. ವಿಚಾರವೆಂದರೆ ಹೇಳಿಕೆಯಲ್ಲ, ವಿಚಾರವೆಂದರೆ ಭಾಷಣವಲ್ಲ, ವಿಚಾರವೆಂದರೆ ಅದು ನಮ್ಮ ಉದಾತ್ತ ನಡವಳಿಕೆ. ಈ ನಡವಳಿಕೆಯನ್ನೇ ಮತ್ತಷ್ಟು ಶ್ರೇಷ್ಠವನ್ನಾಗಿಸುವ ಕಾರ್ಯದಲ್ಲಿ ಎಬಿವಿಪಿ ತೊಡಗಿಸಿಕೊಂಡಿದೆ ಎಂದರು. 

ಎಬಿವಿಪಿಯ ರಾಷ್ಟ್ರೀಯ ಘಟಕದ ಜಿ.ಲಕ್ಷ್ಮಣ ಮಾತನಾಡಿ, ಎಬಿವಿಪಿ ಒಂದು ಸೈದ್ಧಾಂತಿಕ ಆಂದೋಲನ, ವಿದ್ಯಾರ್ಥಿ -ಯುವಕರಲ್ಲಿ ನಾಗರಿಕರ ಪ್ರಜ್ಞೆ ಹಾಗೂ ಕರ್ತವ್ಯದ ಬಗ್ಗೆ ಜಾಗೃತಿ ಮೂಡಿಸುವ ಸಂಘಟನೆಯಾಗಿದೆ. ಸಮಾಜದಲ್ಲಿ ಯಾವ ರೀತಿ ಬದುಕಬೇಕು, ಯಾವ ರೀತಿ ಗೌರವದಿಂದ ನಡೆದುಕೊಳ್ಳಬೇಕು, ಯಾವ ರೀತಿ ವಿಚಾರಗಳನ್ನು ಹಂಚಬೇಕು ಎಂಬಿತ್ಯಾದಿಯ ಬಗ್ಗೆಯೂ ಎಬಿವಿಪಿ ತರಬೇತಿ ನೀಡುವ ಮೂಲಕ ವ್ಯಕ್ತಿತ್ವ ರೂಪಿಸುವ ಪವಿತ್ರ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದೆ ಎಂದರು.

ಎಬಿವಿಪಿ ಪ್ರಧಾನ ಸಂಘಟನಾ ಕಾರ್ಯದರ್ಶಿ  ಶ್ರೀಸ್ವಾಮೀ ಮರುಳಾಪೂರ, ಶ್ರೀಹರ್ಷ ನಾರಾಯಣ, ಎಚ್.ಎಂ. ಚನ್ನಪ್ಪಗೌಡ, ಡಾ.ವೆಂಕಟೇಶ, ಪೃಥ್ವಿಕುಮಾರ, ಸಚೀನ್ ಕುಳಗೇರಿ ಮುಂತಾದವರು ಉಪಸ್ಥಿತರಿದ್ದರು.