ವಿಜಯಪುರ: ಹೆಸ್ಕಾಂ ನಿರ್ಲಕ್ಷ್ಯ: ವಿದ್ಯುತ್ ತಗುಲಿ ಬಾಲಕ ದಾರುಣ ಸಾವು

ಲೋಕದರ್ಶನ ವರದಿ

ವಿಜಯಪುರ 05: ಕೌಟುಂಬಿಕ ವ್ಯಾಜ್ಯ ಇತ್ಯರ್ಥಕ್ಕಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ವ್ಯಕ್ತಿಗೆ ಹೆಸ್ಕಾಂ ಕರೆಂಟ್ ಶಾಕ್ ನೀಡಿದ್ದು, ನಾಲ್ಕು ವರ್ಷದ ಮಗನನ್ನು ಕಳೆದುಕೊಂಡು ಕಕ್ಷಿದಾರನೊಬ್ಬ ಕಂಗಾಲಾಗಿದ್ದಾನೆ 

ಇಲ್ಲಿನ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಮಾಸಿದ್ದ ಮಲಕಾರಿ ಒಡೆಯರ (4) ಎಂಬ ಕಂದನಿಗೆ ವಿದ್ಯುತ್ ತಗುಲಿದೆ. ಗಂಭೀರ ಗಾಯಗೊಂಡಿದ್ದ ಮಾಸಿದ್ದ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ. ಘಟನೆಗೆ ಹೆಸ್ಕಾಂ ಇಲಾಖೆಯ ನಿರ್ಲಕ್ಷೃವೇ ಕಾರಣ ಎನ್ನಲಾಗಿದ್ದು ಈ ಬಗ್ಗೆ ಜಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಘಟನೆ ವಿವರ: 

ಬಬಲೇಶ್ವರ ತಾಲೂಕಿನ ಕಾತ್ರಾಳ ಗ್ರಾಮದ ನಿವಾಸಿ ಮಲಕಾರಿ ಒಡೆಯರ ಗುರುವಾರ ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಮಲಕಾರಿ ಹಾಗೂ ಆತನ ತಂದೆಗೂ ವ್ಯಾಜ್ಯ ಏರ್ಪಟ್ಟಿತು. ಈ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಬಹಳ ದಿನಗಳಿಂದ ನ್ಯಾಯಾಲಯಕ್ಕೆ ಆಗಮಿಸುತ್ತಿದ್ದ ಮಲಕಾರಿ ಎಂದಿನಂತೆ ವಿಚರಣೆಗೆ ಹಾಜರಾಗಲು ಬಂದಿದ್ದರು. 

ಈ ವೇಳೆ ನೀರು ಕುಡಿಯಲೆಂದು ಮಲಕಾರಿ ಮಗನನ್ನು ಬಿಟ್ಟು ಹೋಗಿದ್ದಾರೆ. ಮಗು ಮಾಸಿದ್ದ ಆಟವಾಡುತ್ತ ವಿದ್ಯುತ್ ಕಂಬದ ಹತ್ತಿರ ಹೋಗಿದ್ದಾನೆ. ಕಂಬದ ಕೆಳಭಾಗದಲ್ಲಿ ವಿದ್ಯುತ್ ತಂತಿ ಹೊರಬಂದಿದ್ದು ಅದಕ್ಕೆ ಕಾಲು ಸಿಕ್ಕಿಸಿದ್ದಾನೆ. ಹಠಾತ್ತನೆ ವಿದ್ಯುತ್ ತಗುಲಿದ್ದು ಮಾಸಿದ್ದ ನೆಲಕ್ಕೆ ಬಿದ್ದಿದ್ದಾನೆ. ಕೂಡಲೇ ಆತನ ತಂದೆ ಟವೆಲ್ ಸಹಾಯದಿಂದ ಆತನನ್ನು ಎಳೆದಿದ್ದಾನೆ. 

ಕೂಡಲೇ ಆತನನ್ನು ಆಂಬುಲೆನ್ಸ್ ಸಹಾಯದಿಂದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಮಾಸಿದ್ದ ಇನ್ನೂ ಜೀವಂತವಿದ್ದನೆನ್ನಲಾಗಿದೆ. ಚಿಕಿತ್ಸೆ ವೇಳೆಗಾಗಲೇ ಮಾಸಿದ್ದ ಸಾವಿಗೀಡಾಗಿದ್ದನೆಂದು ಪೊಲೀಸರು ತಿಳಿಸಿದ್ದಾರೆ. 

ಹೆಸ್ಕಾಂ ವಿರುದ್ಧ ಆಕ್ರೋಶ: 

ಹೆಸ್ಕಾಂ ನಿರ್ಲಕ್ಷೃಕ್ಕೆ ಈವರೆಗೆ ಬೀಡಾಡಿ ದನಗಳು ಮಾತ್ರ ಸಾವಿಗೀಡಾಗುತ್ತಿದ್ದವು. ಇದೀಗ ಮನುಷ್ಯರು ಸಾವಿಗೀಡಾಗುತ್ತಿದ್ದು, ಸಾವಿನ ಹೊಣೆ ಹೆಸ್ಕಾಂ ಹೊರಬೇಕೆಂದು ನೆರೆದಿದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯದ ಆವರಣದಲ್ಲೇ ಪರಿಸ್ಥಿತಿ ಹೀಗಿರಬೇಕಾದರೆ ಸ್ಲಂಗಳಲ್ಲಿ, ಮಾರುಕಟ್ಟೆ ಪ್ರದೇಶಗಳಲ್ಲಿ, ಶಾಲೆ-ಕಾಲೇಜ್ಗಳ ಪಕ್ಕದಲ್ಲಿನ ಪರಿಸ್ಥಿತಿ ಹೇಗಿರಬೇಡ. ಇಲಾಖೆಯವರು ಯಾವುದಕ್ಕೂ ಕಂಬಗಳ ಸ್ಥಿತಿ-ಗತಿ ಪರಿಶೀಲಿಸದೇ ಇರುವುದೇ ಇಂಥ ಅವಾಂತರಕ್ಕೆ ಕಾರಣ ಎಂದು ಜನ ಅಸಮಾಧಾನ ಹೊರಹಾಕಿದ್ದಾರೆ.