ಲೋಕದರ್ಶನ ವರದಿ
ವಿಜಯಪುರ 28: ಪ್ರಸ್ತುತ ಸರ್ಕಾರಿ ನೌಕರರಲ್ಲಿ ಸಮನ್ವಯತೆಯ ಕೊರೆಯಿಂದ ಕೆಲಸದ ಒತ್ತಡಗಳು ಹೆಚ್ಚಾಗುತ್ತಿವೆ. ನೌಕರರು ಖಿನ್ನತೆಗೆ ಒಳಗಾಗದೇ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿ ಹಸನ್ಮುಖಿಯಾಗಿ ತಮ್ಮ ತಮ್ಮ ಕರ್ತವ್ಯಗಳನ್ನು ನಿಭಾಯಿಸಬೇಕು ಎಂದು ನಿವೃತ್ತ ತಹಶೀಲ್ಧಾರ ಹಾಗೂ ರಾಜ್ಯ ನೌಕರರ ಸಂಘದ ಮಾಜಿ ಅಧ್ಯಕ್ಷ ಜಿ.ಬಿ.ಶೀಲವಂತ ಸಲಹೆ ನೀಡಿದರು.
ನಗರದ ಮಧುವನ ಹೊಟೆಲ್ನಲ್ಲಿ ರಾಜ್ಯ ನೌಕರರ ಸಂಘದ ಜಿಲ್ಲಾ ಘಟಕಕ್ಕೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಮ್ಮ ದೈನಂದಿನ ಕರ್ತವ್ಯದ ಜೊತೆಗೆ ಇಂದಿನಿಂದ ಹೆಚ್ಚುವರಿ ಕರ್ತವ್ಯ ನಿಭಾಯಿಸಲು ರೂಡಿಸಿಕೊಳ್ಳಬೇಕು. ಕಚೇರಿ ವೇಳೆಯಲ್ಲಿ ಅಧಿಕಾರಿ, ಸಿಬ್ಬಂದಿ ಹಾಗೂ ಜನ ಸಾಮಾನ್ಯರ ಜೊತೆ ಉತ್ತಮ ಬಾಂಧವ್ಯ ಹೊಂದಬೇಕು. ಸಾರ್ವಜನಿಕರು ತಮ್ಮ ಕಚೇರಿ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮ ಕೈಲಾದಷ್ಟು ಸಹಾಯ ಸಹಕಾರ ನೀಡುವುದರೊಂದಿಗೆ ಕರ್ತವ್ಯದ ಜೊತೆಗೆ ಸಾಮಾಜಿಕ ಕಳಕಳಿಯೊಂದಿಗೆ ಕಾರ್ಯ ನಿರ್ವಹಿಸುವುದರ ಮೂಲಕ ಎಲ್ಲರ ಪ್ರೀತಿ ವಿಶ್ವಾಸ ಕೂಡ ಗಳಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ನೌಕರರ ಸಂಘಕ್ಕೆ ಒಂದು ಇತಿಹಾಸವಿದೆ. ನೂತನವಾಗಿ ಆಯ್ಕೆಯಾಗಿರುವ ತಾವೆಲ್ಲರೂ ಆತ್ಮ ವಿಶ್ವಾಸ ಶ್ರಧ್ಧೆಯಿಂದ ಅಧ್ಯಕ್ಷರೊಂದಿಗೆ ಉತ್ತಮ ಬಾಂದವ್ಯ ಹೊಂದಿಕೊಂಡು ಸರ್ಕಾರಿ ನೌಕರರ ಹಾಗೂ ಸಂಘದ ಶ್ರೇಯೋಭಿವೃದ್ದಿಗಾಗಿ ಶ್ರಮಿಸಬೇಕು. ಹಿಂದಿನ ಅಧ್ಯಕ್ಷರೂ ಕೂಡ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ಕಾಲಾವಧಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನೆರವೇರಿಸುವ ಕೀರ್ತಿ ಅವರಿಗೆ ಸಲ್ಲುತ್ತದೆ. ಅದರಂತೆ ನೌಕರರು ಹಾಗೂ ಸಂಘದ ಅಭಿವೃದ್ದಿಗಾಗಿ ಶ್ರಮಿಸಿದ್ದಾರೆ.
ಆರೋಗ್ಯ ಇಲಾಖೆಯ ಬಿ.ಎಲ್ ವಿಜಯದಾರ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ಏಳಿಗೆ, ಹಿತರಕ್ಷಣೆ ಹಾಗೂ ನೌಕರರ ಯಾವುದೇ ಕುಂದು ಕೊರತೆಗಳಿಗೆ ಸ್ಫಂದಿಸಲು ಸದಾ ಸಿದ್ದರಾಗಿರಬೇಕು ಸಂಘದ ಚಟುವಟಿಕೆ ಚುರುಕುಗೊಳಿಸಲು ನೂತನವಾಗಿ ಆಯ್ಕೆಯಾದ ತಾವೆಲ್ಲರೂ ಒಗ್ಗಟ್ಟು [ಪ್ರದಶಿಸಬೇಕು ಯಾವುದೇ ನೌಕರರಿಗೆ ಅನ್ಯಾಯವಾಗದಂತೆ ನಾವೆಲ್ಲರೂ ಶ್ರಮಿಸೋಣ ಸಂಘವು ಹೆಚ್ಚು ಕ್ರಿಯಾಶೀಲವಾಗಿ ಬೆಳೆಯಲು ತಮ್ಮಲ್ಲರ ಸಹಾಯ ಸಹಕಾರ ಅತ್ಯಗತ್ಯ ಎಂದು ಹೇಳಿದರು. ಆದಾಯ ತೆರಿಗೆ ಇಲಾಖೆಯ ಬೆಳ್ಳೆಣ್ಣವರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾಧ್ಯಕ್ಷ ಎಸ್.ಬಿ.ಪಾಟೀಲ, ಕಂದಾಯ ಇಲಾಖೆಯ ಸುರೇಶ ತೇರದಾಳ, ಭೀನಮಗೌಡ ಬಿರಾದಾರ, ದಳವಾಯಿ, ಹೊಟ್ಕುರ, ಅಶೋಕ ಜಾಧವ, ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು ಗಂಗಾಧರ ಜೇವೂರ ಸ್ವಾಗತಿಸಿ ರಾಜಶೇಖರ ದೈವಾಡಿ ವಂದಿಸಿದರು.ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ನೇಮಕ ಪತ್ರದೊಂದಿಗೆ ಸನ್ಮಾನಿಸಲಾಯಿತು.