ಬೆಂಗಳೂರು, ಮೇ 20,ಮೈಸೂರು ಮಹಾರಾಜರ ಆಳ್ವಿಕೆಯಲ್ಲಿ ಹಿರಿಯೂರು ತಾಲೂಕಿನ ವಾಣಿವಿಲಾಸಪುರ ಗ್ರಾಮದ ಬಳಿ ವೇದಾವತಿ ನದಿಗೆ ಅಡ್ಡಲಾಗಿ 30 ಟಿಎಂಸಿ ಸಂಗ್ರಹಣಾ ಸಾಮರ್ಥ್ಯದ ಮಾರಿಕಣಿವೆ ಜಲಾಶಯ ನಿರ್ಮಾಣ ಕಾಮಗಾರಿಯನ್ನು 1902ರಲ್ಲಿ ಹಾಗೂ ನಾಲೆಗಳ ನಿರ್ಮಾಣ ಕಾರ್ಯವನ್ನು 1907ರಲ್ಲಿ ಪೂರ್ಣಗೊಳಿಸಿ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ಜಲಾಶಯದ ಅಚ್ಚುಕಟ್ಟು ಪ್ರದೇಶವು 12,135 ಹೆಕ್ಟೇರ್ ಇದ್ದು, ಇದರ ಪೈಕಿ ತೋಟಗಾರಿಕೆ ಬೆಳೆಗಳ ಪ್ರದೇಶ 5557 ಹೆಕ್ಟೇರ್ ಮತ್ತು ಖುಷ್ಕಿ ಪ್ರದೇಶ 6578 ಹೆಕ್ಟೇರ್ ಇದೆ. ಈ ಜಲಾಶಯದಿಂದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ ಪಟ್ಟಣ, ಡಿಆರ್‌ಡಿಒ, ಐಐಎಸ್‌ಸಿ, ಐಆರ್‌ಬಿ ಮತ್ತು ಬಿಎಆರ್‌ಸಿ ಸಂಸ್ಥೆಗಳಿಗೆ ಹಾಗೂ ಮಾರ್ಗ ಮಧ್ಯದ 18 ಹಳ್ಳಿಗಳಿಗೆ ಕುಡಿಯುವ ನೀರಿಗಾಗಿ 0.981 ಟಿಎಂಸಿ ಹಾಗೂ ಐಮಂಗಲ ಮತ್ತು 38 ಹಳ್ಳಿಗಳಿಗೆ ಕುಡಿಯುವ ನೀರಿಗಾಗಿ 0.155 ಟಿಎಂಸಿ ನೀರನ್ನು ಪೂರೈಸಲು ಹಂಚಿಕೆ ಮಾಡಲಾಗಿದೆ. ವಾಣಿವಿಲಾಸ ಸಾಗರ ಜಲಾಶಯ ಯೋಜನೆಯನ್ನು ಒಟ್ಟಾರೆ 5.25 ಟಿಎಂಸಿ ನೀರಿನ ಹಂಚಿಕೆಯಾಗಿದೆ ಎಂದು ತಿಳಿಸಿದರು.
ವಾಣಿ ವಿಲಾಸ ಸಾಗರ ಜಲಾಶಯ ನಿರ್ಮಿಸಿದ ನಂತರ 118 ವರ್ಷಗಳಲ್ಲಿ 1933ರಲ್ಲಿ ಮಾತ್ರ ಕೇವಲ ಒಂದು ಬಾರಿ ಜಲಾಶಯದ ಸಂಗ್ರಹಣಾ ಸಾಮರ್ಥ್ಯವಾದ 30 ಟಿಎಂಸಿ ನೀರು ಶೇಖರಣೆಯಾಗಿದ್ದು, 2000ರಲ್ಲಿ ಅತಿ ಹೆಚ್ಚು ಅಂದರೆ 22 ಟಿಎಂಸಿ ನೀರು ಸಂಗ್ರಹವಾಗಿದೆ. ಹಲವಾರು ವರ್ಷಗಳಿಂದ ಮಳೆಯ ಕೊರತೆಯಿಂದಾಗಿ ಜಲಾಶಯಕ್ಕೆ ನೀರಿನ ಒಳಹರಿವು ಗಣನೀಯವಾಗಿ ಕ್ಷೀಣಿಸಿದ್ದು, ಕೇವಲ 0.50ರಿಂದ 1 ಟಿಎಂಸಿ ಉಪಯುಕ್ತ ನೀರು ಮಾತ್ರ ಸಂಗ್ರಹವಾಗಿದೆ. ವಾಣಿವಿಲಾಸ ಸಾಗರ ಜಲಾಶಯವು ನೀರಿನ ಕೊರತೆಯನ್ನು ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಭದ್ರಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ಈ ಕೊರತೆಯನ್ನು ನೀಗಿಸಲು ಶಾಶ್ವತವಾಗಿ 2 ಟಿಎಂಸಿ ನೀರನ್ನು ಹಂಚಿಕೆ ಮಾಡಿದೆ ಎಂದು ತಿಳಿಸಿದರು.
ಭದ್ರಾ ಜಲಾಶಯದಿಂದ ನೀರು ಎತ್ತುವ ಭದ್ರಾ ಮೇಲ್ದಂಡೆ ಯೋಜನೆಯ ಏತ ಕಾಮಗಾರಿಗಳು ಪೂರ್ಣಗೊಂಡಿದ್ದು, ಕಳೆದ ವರ್ಷದ ಮಳೆಗಾಲದಲ್ಲಿ ಪ್ರಾಯೋಗಿಕವಾಗಿ ನೀರನ್ನು ಪಂಪ್ ಮಾಡಿ ಒಟ್ಟು 3.33 ಟಿಎಂಸಿ ನೀರನ್ನು ವಾಣಿವಿಲಾಸ ಸಾಗರ ಜಲಾಶಯಕ್ಕೆ ಪೂರೈಸಲಾಗಿದೆ. ಈ ವರ್ಷದಲ್ಲಿ ಮಳೆಯಿಂದ 7.24 ಟಿಎಂಸಿ ನೀರಿನ ಒಳಹರಿವು ಬಂದಿದ್ದು, ಒಟ್ಟಾರೆಯಾಗಿ ಜಲಾಶಯದಲ್ಲಿ 10.57 ಟಿಎಂಸಿ ನೀರು ಸಂಗ್ರಹವಾಗಿದೆ.ಪ್ರಸಕ್ತ ಸಾಲಿನಲ್ಲಿ ಜಲಾಶಯದ ನಿಗದಿಪಡಿಸಿದ ನೀರಿನ ಹಂಚಿಕೆ 5.25 ಟಿಎಂಸಿ ವಾರ್ಷಿಕ ಬೇಡಿಕೆಯನ್ನು ಪೂರೈಸಿದ ನಂತರವೂ ಸಹ 5 ಟಿಎಂಸಿಯಷ್ಟು ಹೆಚ್ಚುವರಿ ನೀರಿನ ಸಂಗ್ರಹ ಲಭ್ಯವಿರುವ ಹಿನ್ನೆಲೆಯಲ್ಲಿ ಬೇಸಿಗೆಯಲ್ಲಿ ಚಿತ್ರದುರ್ಗ ಜಿಲ್ಲೆಯ ವಿವಿಧ ತಾಲೂಕುಗಳ ವೇದಾವತಿ ನದಿ ಪಾತ್ರದ ಎರಡೂ ಇಕ್ಕೆಲಗಳ ಗ್ರಾಮಗಳ ಜನ ಜಾನುವಾರುಗಳಿಗಾಗಿ ಕುಡಿಯುವ ನೀರು ಪೂರೈಸಲು ಹಾಗೂ ಬ್ಯಾರೇಜುಗಳನ್ನು ತುಂಬಿಸಲು ಸರ್ಕಾರವು ನಿರ್ಧರಿಸಿ ಏಪ್ರಿಲ್ 23ರಿಂದ ವೇದಾವತಿ ನದಿ ಪಾತ್ರಕ್ಕೆ ನೀರನ್ನು ಹರಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.