ನವದೆಹಲಿ, ನ 7: ಅಮೆರಿಕ - ಚೀನಾ ನಡುವಿನ ವ್ಯಾಪಾರ ಸಹಕಾರ ಒಪ್ಪಂದದ ನಿರೀಕ್ಷೆಗಳು ಮತ್ತು ಫೆಡರಲ್ ಬ್ಯಾಂಕ್ ನ ಬಡ್ಡಿ ಕಡಿತ ನೀತಿಗಳಿಂದಾಗಿ ವಿಶ್ವದ ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ನ ಮಾಜಿ ಗವರ್ನರ್ ರಘುರಾಮ್ ರಾಜನ್ ಅಭಿಪ್ರಾಯಪಟ್ಟಿದ್ದಾರೆ. ಸಿಂಗಪುರದಲ್ಲಿ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ಅಭಿಮತ ವ್ಯಕ್ತಪಡಿಸಿದ್ದಾರೆ. ಈ ವರ್ಷ ಫೆಡರಲ್ ಬ್ಯಾಂಕ್ ಮೂರು ಬಾರಿ ಬಡ್ಡಿ ದರಗಳನ್ನು ಕಡಿತ ಮಾಡಿರುವುದು ಮತ್ತು ವ್ಯಾಪಾರ ಮಾತುಕತೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಜಾಗತಿಕ ಆರ್ಥಿಕ ಪರಿಸ್ಥಿತಿ ನಿಧಾನವಾಗಿ ಉತ್ತಮ ಸ್ಥಿತಿಗೆ ಮರಳುತ್ತಿದೆ ಎಂದು ಅವರು ಹೇಳಿದ್ದಾರೆ. ವ್ಯಾಪಾರ ಒಪ್ಪಂದದಲ್ಲಿ ಸ್ವಲ್ಪ ಮಟ್ಟಿನ ಪ್ರಗತಿ ಕಂಡು ಬಂದಿರುವುದು ಆರ್ಥಿಕ ಬೆಳವಣಿಗೆಗೆ ಆಶಾದಾಯಕವಾಗಿದೆ. ಆದರೆ ಇದು ಶಾಶ್ವತ ಪರಿಹಾರವಲ್ಲ. ಇನ್ನು ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಕಳೆದ ವರ್ಷ ಇದ್ದ ಸ್ಥಳಕ್ಕಿಂತ ನಾವು ಇಂದು ಉತ್ತಮ ಸ್ಥಳದಲ್ಲಿದ್ದೇವೆ ಎಂದು ಅವರು ಒಗಟಾಗಿ ಹೇಳಿದ್ದಾರೆ. ಬ್ಯಾಂಕಿಂಗ್ ಕೆಲಸಗಳು ಇನ್ನಷ್ಟು ಕ್ಲಿಷ್ಟಕರವಾಗುತ್ತಿದ್ದು ಹೆಚ್ಚು ರಾಜಕೀಯಗೊಳ್ಳುತ್ತಿದೆ. ಬ್ಯಾಂಕ್ ಮುಖ್ಯಸ್ಥರ ಹುದ್ದೆಗೆ ಸ್ಥಳೀಯ ರಾಜಕೀಯ ಸ್ಥಿತಿಯನ್ನು ಅರ್ಥಮಾಡಿಕೊಳ್ಳುವವರು ಬೇಕಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಯೂರೋಪಿನ ಸೆಂಟ್ರಲ್ ಬ್ಯಾಂಕ್, ವ್ಯಾಪಾರ ಉದ್ಯಮಕ್ಕೆ ಅನುಕೂಲವಾಗುವಂತೆ ತನ್ನ ಆರ್ಥಿಕ ನೀತಿಯನ್ನು ಮತ್ತಷ್ಟು ಉದಾರಗೊಳಿಸುವ ಸಾಧ್ಯತೆ ಕಡಿಮೆಯಾಗಿದೆ ಎಂದು ರಘುರಾಮ್ ರಾಜನ್ ಅಭಿಪ್ರಾಯಪಟ್ಟಿದ್ದಾರೆ.