ಅಗಡಿ ಪ್ರಾಥಮಿಕ ಶಾಲೆ ಸುವರ್ಣ ಮಹೋತ್ಸವದ ಪೂರ್ವಭಾವಿ ಸಭೆ
ಹಾವೇರಿ 11: ಹಾವೇರಿ ತಾಲೂಕಿನ ಅಗಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.2ರ ಸುವರ್ಣ ಮಹೋತ್ಸವ ಆಚರಣೆಯ ಕುರಿತು ಪೂರ್ವಭಾವಿ ಸಭೆ ಎಸ್.ಡಿ.ಎಂ.ಸಿ ಅಧ್ಯಕ್ಷ ಶಿವಪ್ಪ ಬಳಲಕೊಪ್ಪ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು. ಬರುವ ಏಪ್ರಿಲ್ ಅಂತ್ಯದೊಳಗಾಗಿ ಎರಡು ದಿನಗಳವರೆಗೆ ಶಾಲೆ ಸುವರ್ಣ ಮಹೋತ್ಸವವನ್ನು ಆಡಂಬರಕ್ಕಿಂತ ಅರ್ಥಪೂರ್ಣವಾಗಿ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.ಶಾಲೆಯಲ್ಲಿ ಸೇವೆ ಸಲ್ಲಿಸಿದ ಗುರುಗಳಿಗೆ ಗುರುವಂದನೆ, ತಾಯಂದಿರ ಪಾದಪೂಜೆ, ಸಾಧಕರಿಗೆ ಸನ್ಮಾನ, ಹಿರಿಯ ವಿದ್ಯಾರ್ಥಿಗಳ ಪುನರ್ ಮಿಲನ, ಶಿಕ್ಷಣ ತಜ್ಞರ ಆಹ್ವಾನ, ಸ್ಮರಣ ಸಂಚಿಕೆ, ಸಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮುಂತಾದ ವಿಷಯಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರತ್ನ ಮಣೆಗಾರ, ಉಪಾಧ್ಯಕ್ಷ ಬಸವರಾಜ ಕಡ್ಲಿ, ಶಿಕ್ಷಣ ಚಿಂತಕ ನಿಜಲಿಂಗಪ್ಪ ಬಸೇಗೆಣ್ಣಿ, ಸಾಹಿತಿ ಹನುಮಂತಗೌಡ ಗೊಲ್ಲರ, ಗ್ರಾಪಂ ಸದಸ್ಯರಾದ ಶಿವಪ್ಪ ಜವಳಿ, ರೇಣುಕಾ ಕಮ್ಮಾರ್, ಈಶಪ್ಪ ಭೀಮಕ್ಕನವರ್, ಶಾಂತವ್ವ ಕಾಟೇನಹಳ್ಳಿ, ಬೀಬಿ ಹಾಜರಾಬಿ ಎಣ್ಣೆ, ರಾಜೀವ್ ಶಿವಣ್ಣನವರ್, ಮುಖಂಡರಾದ ತಾನೋಜಿ ತಳ್ಳಳ್ಳಿ, ವಿರೂಪಾಕ್ಷಪ್ಪ ಹೆಡಿಗೊಂಡ, ಹರೀಶ್ ಕಪೂರ್, ದುಂಡಪ್ಪ ಶಾವಿ, ರೇವಣಪ್ಪ ರಾಗಿಯವರ, ರೋಹಿತ್ ಹೆಡಿಗೊಂಡ್, ಪುಟ್ಟಯ್ಯ ಮಾಗೋಡ್, ಅಶೋಕ್ ಸುಣಗಾರ್, ಹನುಮಂತಪ್ಪ ಇರಗಾರ್, ಮುಂತಾದವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ವಿ.ವಿ. ಕಮ್ಮಾರ ಪ್ರಸ್ತಾವಿಕವಾಗಿ ಮಾತನಾಡಿದರು. ಶಂಕರ್ ಚಿಕ್ಕಳ್ಳಿ ವಂದಿಸಿದರು.