ಕಲಬುರಗಿ, ಏ.22,ಸೂರ್ಯ ನಗರಿ ಕಲಬುರಗಿಯಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುವ ಮೂಲಕ ತಾಂಡವವಾಡುತ್ತಿದೆ.ಜಿಲ್ಲೆಯಲ್ಲಿ ಮತ್ತೆ ಐವರಲ್ಲಿ ಕೊರೊನಾ ಸೋಂಕು ದೃಢಪಡುವ ಮೂಲಕ ಸೋಂಕಿತರ ಸಂಖ್ಯೆ ಬುಧವಾರ 35ಕ್ಕೆ ಏರಿಕೆ ಆಗಿದೆ.ಈಗಾಗಲೇ ಜಿಲ್ಲೆಯ ಶಹಾಬಾದ್ ಪಟ್ಟಣ ಹಾಗೂ ಪಟ್ನಾ ಗ್ರಾಮ ಸೇರಿದಂತೆ ಚಿತ್ತಾಪುರ ಜಿಲ್ಲೆಯ ವಾಡಿಗೂ ಲಗ್ಗೆ ಇಟ್ಟಿದ್ದ ಕೊರೊನೊ ಇದೀಗ ಆಳಂದ ತಾಲೂಕಿಗೂ ಪಸರಿಸಿದೆ.ಅಳಂದ ಪಟ್ಟಣದ ಶರಣ್ ನಗರದ 57 ವರ್ಷದ (ರೋಗಿ ಸಂಖ್ಯೆ-422) ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. 57 ವರ್ಷದ ಈ ವ್ಯಕ್ತಿ ಅನಾರೋಗ್ಯಕ್ಕೀಡಾಗಿದ್ದು, ವ್ಯಕ್ತಿಯಲ್ಲಿ ತೀವ್ರ ಉಸಿರಾಟ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವುದು ಬೆಳಕಿಗೆ ಬಂದಿದೆ. ಸದ್ಯ ಆತನನ್ನು ಇಎಸ್ಐ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ಗೆ ಸ್ಥಳಾಂತರಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಜಿಲ್ಲೆಯಾದ್ಯಂತ ಕೋವಿಡ್-19 ಹಬ್ಬಿತ್ತಿರುವ ಹಿನ್ನೆಲೆಯಲ್ಲಿ ಜನ ಭಯಭೀತಗೊಂಡಿದ್ದಾರೆ. ಸದ್ಯ ಆಳಂದ ಪಟ್ಟಣದ ವಾರ್ಡ್ ಸಂಖ್ಯೆ 7 , 8 ಎರಡನ್ನು ಅಧಿಕಾರಿಗಳು ಸೀಲ್‌ಡೌನ್ ಮಾಡಿದ್ದಾರೆ.57 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಆತನ ಜೊತೆ ನೇರ ಸಂಪರ್ಕ ಹೊಂದಿದವರ ಮಾಹಿತಿ ಕಲೆ ಹಾಕಲು ಜಿಲ್ಲಾಡಳಿತ ಮುಂದಾಗಿದೆ. 57 ವರ್ಷದ ಸೋಂಕಿತ ಕುಟುಂಬಸ್ಥರನ್ನು ಕ್ವಾರೆಂಟೈನ್ ಮಾಡಲಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ ನಾಲ್ವರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.