ಬೆಂಗಳೂರು, ಏ.20,ಕೊರೊನಾ ವಿರುದ್ಧ ಇಡೀ ವಿಶ್ವವೇ ಒಂದಾಗಿ ಹೋರಾಡುತ್ತಿರುವಾಗ ಪಾದರಾಯನಪುರದಲ್ಲಿ ದುರುದ್ದೇಶಪೂರಕವಾಗಿ ಹಲ್ಲೆ ಮಾಡಿದ್ದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಹೇಳಿದ್ದಾರೆ.ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾದರಾಯನಪುರದ ಜನ ಪೊಲೀಸ್ ಹಾಗೂ ವೈದ್ಯಕೀಯ ಸಿಬ್ಬಂದಿಗೆ ಸಹಕಾರ ನೀಡಬೇಕಿತ್ತು. ಆದರೆ ಬಿಬಿಎಂಪಿ, ಪೊಲೀಸ್ ಹಾಗೂ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ, ಸಾರ್ವಜನಿಕ ಆಸ್ತಿ ಪಾಸ್ತಿಗೆ ನಷ್ಟ ಉಂಟು ಮಾಡಿದ್ದಾರೆ. ಇದರಿಂದ ಸಮಾಜದಲ್ಲಿ ಏಕೆ ಇವರು ಹೀಗೆ ಮಾಡುತ್ತಿದ್ದಾರೆ ಎನ್ನುವ ಭಾವನೆ ವ್ಯಕ್ತವಾಗುತ್ತಿದೆ. ಲಾಕ್ ಡೌನ್ ನಡುವೆಯೂ ಕೂಲಿಕಾರರ ತ್ಯಾಗ ದೊಡ್ಡದು. ಅವರೆಲ್ಲ ತಮ್ಮ ಸಂಪಾದನೆ ಬಿಟ್ಟು ಸಹಕಾರ ನೀಡುತ್ತಿದ್ದಾರೆ. ಹೀಗಿದ್ದಾಗ ಪಾದರಾಯನಪುರದಲ್ಲಿ ಹಲ್ಲೆ ನಡೆದಿದ್ದು ಸರಿಯಲ್ಲ. ಕಾನೂನು ಕೈಗೆತ್ತಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಪಾದರಾಯನಪು ರದಲ್ಲಿ ನಡೆದ ಹಲ್ಲೆಯನ್ನು ರಾಜಕಾರಣಿಗಳು ಖಂಡಿಸಬೇಕಿದೆ ಎಂದರು.ಇದು ಒಂದು ಜಾತಿ, ಧರ್ಮದ ವಿಚಾರವಲ್ಲ. ಯಾರಿಗಾದರೂ ಕೊರೊನಾ ಹರಡಬಹುದು.
ಇದನ್ನು ಸಂಪೂರ್ಣವಾಗಿ ತೊಲಗಿಸಲು ಇಡೀ ವಿಶ್ವವೇ ಒಂದಾಗಿದೆ. ಪಾದರಾಯನಪುರದಲ್ಲಿ ದುರುದ್ದೇಶದಿಂದ ಮಾಡಿರಬಹುದು ಎನ್ನುವ ಅನುಮಾನವೂ ಇದೆ ಎಂದರು.ಕೊರೊನಾ ವಿರುದ್ಧ ಪೊಲೀಸರು, ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ದಿನದ ಇಪ್ಪತ್ತನಾಲ್ಕು ತಾಸು ದುಡಿಯುತ್ತಿದ್ದಾರೆ. ಇವರ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸುವುದನ್ನು ಬಿಟ್ಟು ಇಂತಹದ್ದೇ ಸಮಯಕ್ಕೆ ಬರಬೇಕಿತ್ತು ಎಂದು ಶಾಸಕ ಜಮೀರ್ ಅಹ್ಮದ್ ಹೇಳಿದ್ದು ತಪ್ಪು ಎಂದು ಖಂಡಿಸಿದರು.