ನವದೆಹಲಿ, ನ 9 : ಆಯೋಧ್ಯೆಯಲ್ಲಿನ ರಾಮಜನ್ಮಭೂಮಿ- ಬಾಬರಿ ಮಸೀದಿ ಸಂಬಂಧಿಸಿದ ವಿವಾದಾತ್ಮಕ ನಿವೇಶನ ಸಂಬಂಧ ತನ್ನ ತೀರ್ಪನ್ನು ಸುಪ್ರೀಂ ಕೋರ್ಟ್ ಶನಿವಾರ ಪ್ರಕಟಿಸಿದ್ದು, ವಿವಾದಿತ ಸ್ಥಳ ವನ್ನು ರಾಮಜನ್ಮಭೂಮಿ ನ್ಯಾಸ್ ಗೆ ನೀಡಿದ್ದು, ಮಸೀದಿ ನಿರ್ಮಿಸಿಕೊಳ್ಳಲು ಸುನ್ನಿ ವಕ್ಫ್ ಮಂಡಳಿಗೆ ಐದು ಎಕರೆ ಪರ್ಯಾಯವಾಗಿ ಭೂಮಿ ಕಲ್ಪಿಸಬೇಕು ಎಂದು ಆದೇಶಿಸಿದೆ. ತನ್ನ ಆದೇಶವನ್ನು ಅನುಷ್ಠಾನ ಗೊಳಿಸಲು ಮೂರು ತಿಂಗಳೊಳಗೆ ಟ್ರಸ್ಟ್ ರಚಿಸಬೇಕು ಎಂದು ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ನ್ಯಾಯಾಲಯದ ಹೊರಗೆ ವಿವಾದ ಇತ್ಯರ್ಥಪಡಿಸಲು ಮಧ್ಯಸ್ಥಿಕೆ ಸಮಿತಿ ವಿಫಲಗೊಂಡ ನಂತರ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನಿಕ ಪೀಠ 40 ದಿನಗಳ ಕಾಲ ನಿರಂತರವಾಗಿ ವಿಚಾರಣೆ ನಡೆಸಿ ಈ ತೀಪು ಪ್ರಕಟಿಸಿದೆ. 2.77 ಎಕರೆ ವಿವಾದಿತ ಸ್ಥಳ ತಮಗೆ ಸೇರಿದ್ದು ಎಂದು ಹಿಂದೂ ಮತ್ತು ಮುಸ್ಲಿಂ ಸಮುದಾಯಗಳೆರಡೂ ವಾದಿಸಿದ್ದವು. ಈ ವಿಷಯ 1980ರ ಬಳಿಕದ ಭಾರತೀಯ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸಿತ್ತು. ವಿವಾದಾತ್ಮಕ ಸ್ಥಳದಲ್ಲಿದ್ದ ಮಸೀದಿಯನ್ನು 1992ರ ಡಿಸೆಂಬರ್ ನಲ್ಲಿ ದ್ವಂಸ ಮಾಡಲಾಗಿತ್ತು. ಈ ಸ್ಥಳದಲ್ಲಿ ರಾಮಮಂದಿರ ನಿರ್ಮಾಣ ಆಗಬೇಕು ಎಂಬುದು ಹಿಂದುತ್ವ ವಾದಿ ಕಾರ್ಯಕರ್ತರ ವಾದವಾಗಿತ್ತು. ಆದರೆ, ದೇವಾಲಯವನ್ನು ದ್ವಂಸಗೊಳಿಸಿ ಆ ಸ್ಥಳದಲ್ಲಿ ಮಸೀದಿ ನಿರ್ಮಿಸಲಾಗಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ಇಲ್ಲ ಎಂದು ಪ್ರಕರಣದಲ್ಲಿ ಮುಸ್ಲಿಂ ಕಕ್ಷಿದಾರರು ವಾದಿಸಿದ್ದರು.