ಮಳೆಗಾಲದಲ್ಲಿ ಕೋಟೆ ಪ್ರದೇಶದಿಂದ ಹರಿದು ಮನೆಗಳಿಗೆ ನುಗ್ಗುತ್ತಿದ್ದ ನೀರಿಗೆ ಬ್ರೇಕ್

ಬೆಳಗಾವಿ ಜು.6: ಮಳೆಗಾಲದ ಸಂದರ್ಭದಲ್ಲಿ ನಗರದ ನಾಲ್ಕು ವಾಡರ್್ಗಳ ಪ್ರದೇಶಕ್ಕೆ ಕೋಟೆ ಕೆರೆ ಬಳಿಯ ನಾಲಾದಿಂದ ನೀರು ನುಗ್ಗುತ್ತಿತ್ತು. ಬಹುದಿನಗಳ ಈ ಸಮಸ್ಯೆಗೆ ಈಗ ಪರಿಹಾರ ದೊರಕುತ್ತಿದ್ದು, ಶಾಸಕ ಅನಿಲ ಬೆನಕೆ ಪ್ರಯತ್ನದಿಂದ ಹಿನ್ನೀರು ಹರಿಯುತ್ತಿದ್ದ ನಾಲಾ ಪೈಪ್ನ್ನು ಬದಲಾಯಿಸಿ ಹೆಚ್ಚಿನ ಸಾಮಥ್ರ್ಯದ ಪೈಪ್ ಅಳವಡಿಸುವ ಕಾರ್ಯ ಭರದಿಂದ ನಡೆದಿದೆ. 

ನಗರದಲ್ಲಿ ಮಳೆ ಸ್ವಲ್ಪ ಹೆಚ್ಚಿದರೂ ಹಲವು ತಗ್ಗು ಪ್ರದೇಶಗಳಲ್ಲಿ ನೀರು ಹರಿದು ಪ್ರತಿ ವರ್ಷವೂ ಸಮಸ್ಯೆ ಆಗುತ್ತಿತ್ತು. ಮನೆಗಳಿಗೆ ನೀರು ನುಗ್ಗಿ ಹಾನಿಯಾಗುತ್ತಿದೆ, ಈ ಪ್ರದೇಶಕ್ಕೆ ಬಾಡಿಗೆದಾರರೂ ಬರುತ್ತಿಲ್ಲ ಎಂದು ಶಿವಾಜಿ ನಗರ, ಪಂಜಿ ಬಾಬಾ, ವೀರಭದ್ರ ನಗರ, ಅಸದ್ಖಾನ್ ಸೊಸೈಟಿ ಪ್ರದೇಶಗಳ ಜನತೆ ಹೇಳುತ್ತಿದ್ದರು. ಈಗ ಈ ಸಮಸ್ಯೆಗೆ ಬ್ರೇಕ್ ಬೀಳಲಿದೆ. ನಾಲಾ ಪೈಪ್ ಗಾತ್ರ ಹೆಚ್ಚಿಸಿ ಅಳವಡಿಸುವ ಕಾರ್ಯ ಭರದಿಂದ ಸಾಗಿದೆ. ಶಾಸಕ ಅನಿಲ ಬೆನಕೆ ಪ್ರಯತ್ನದಿಂದ ಈ ಕೆಲಸಕ್ಕೆ ಚಾಲನೆ ನೀಡಿರುವುದರಿಂದ ಜನತೆ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಅನಿಲ ಬೆನಕೆ ಮಾತನಾಡಿ, ಮನೆಗಳಿಗೆ ನೀರು ನುಗ್ಗುವುದನ್ನು ತಡೆಯಲು ಏನಾದರೂ ಮಾಡಿ ಎಂದು ನಾಲ್ಕು ಪ್ರದೇಶಗಳ ಜನತೆ ಕೇಳುತ್ತಲೇ ಇದ್ದರು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಬೇಕೆಂದು ಈಗ ಪೈಪ್ ಬದಲಾಯಿಸಿ ನೀರು ಸರಾಗವಾಗಿ ಹರಿದುಹೋಗಲು ಅವಕಾಶ ಮಾಡಿಕೊಡಲು ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿ, ಮಾಜಿ ನಗರ ಸೇವಕ ಸಾದಿಕ್ ಇನಾಮದಾರ್ ಮಾತನಾಡಿ, ಸುಮಾರು ವರ್ಷಗಳಿಂದ ಇರುವ ಸಮಸ್ಯೆಯನ್ನು ಬಗೆಹರಿಸಲು ಕಾಮಗಾರಿ ಕೈಗೊಂಡಿದ್ದಾರೆ. ಇದು ನಿವಾಸಿಗಳಿಗೆ ಖುಷಿ ನೀಡಿದೆ. ಶಾಸಕ ಅನಿಲ ಬೆನಕೆ ಅವರಿಗೆ ಧನ್ಯವಾದ, ಮಹಾನಗರ ಪಾಲಿಕೆಯ ಎಲ್ಲ ಅಧಿಕಾರಿಗಳು, ಸಿಬ್ಬಂದಿಗೂ ಧನ್ಯವಾದ ಎಂದರು.