ಹಿಂದೂ ಪುರೋಹಿತ ಚಿನ್ಮಯ್ ಕೃಷ್ಣದಾಸ್ ಬ್ರಹ್ಮಚಾರಿ ಬಂಧನ ತೀವ್ರ ಕಳವಳಕಾರಿ

ಹಿಂದೂ ಸನ್ಯಾಸಿ, ಇಸ್ಕಾನ್ ಸದಸ್ಯ ಚಿನ್ಮೋಯ್ ಕೃಷ್ಣ ದಾಸ್

ನವದೆಹಲಿ 26: ಬಾಂಗ್ಲಾದೇಶದಲ್ಲಿ ಹಿಂದೂ ಪುರೋಹಿತ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ನಾಯಕ ಚಿನ್ಮಯ್ ಕೃಷ್ಣದಾಸ್ ಬ್ರಹ್ಮಚಾರಿ ಅವರ ಬಂಧನವನ್ನು ಖಂಡಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆ ನೀಡಿದೆ.

ಪ್ರಮುಖ ಹಿಂದೂ ಸನ್ಯಾಸಿ ಮತ್ತು ಇಸ್ಕಾನ್ ಸದಸ್ಯ ಚಿನ್ಮೋಯ್ ಕೃಷ್ಣ ದಾಸ್ ಅವರನ್ನು ಸೋಮವಾರ (ನ.25) ಢಾಕಾದಲ್ಲಿ ಬಂಧಿಸಲಾಗಿದ್ದು, ನಗರದಾದ್ಯಂತ ಪ್ರತಿಭಟನೆಗಳು ನಡೆದಿವೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ಹಿಂಸಾಚಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರ ಬಂಧನವು ದೇವಾಲಯಗಳು ಮತ್ತು ವ್ಯವಹಾರಗಳ ಮೇಲೆ ಹೆಚ್ಚುತ್ತಿರುವಗಳನ್ನೂ ಉತ್ತೇಜಿಸುತ್ತದೆ. ವರ್ಷದ ಆರಂಭದಲ್ಲಿ ಆಡಳಿತ ಬದಲಾವಣೆಯ ನಂತರ ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ದಾಸ್ ಇತ್ತೀಚೆಗೆ ಕಳವಳ ವ್ಯಕ್ತಪಡಿಸಿದ್ದರು.

ಬಾಂಗ್ಲಾದೇಶದಲ್ಲಿ ಸಮ್ಮಿಳಿತ ಸನಾತನ ಜಾಗರಣ ವೇದಿಕೆ ವಕ್ತಾರರೂ ಆಗಿರುವ ಚಿನ್ಮಯ್ ಕೃಷ್ಣದಾಸ್ ಅವರ ಬಂಧನ ಮತ್ತು ಜಾಮೀನು ನಿರಾಕರಣೆ ವಿಚಾರವನ್ನು ನಾವು ತೀವ್ರ ಕಳವಳದಿಂದ ಗಮನಿಸಿದ್ದೇವೆ. ಈ ಘಟನೆಯು ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಗಳಿಗೆ ಮತ್ತಷ್ಟು ಪ್ರಚೋದನೆ ನೀಡಿದಂತಾಗುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬೇಸರ ಹೊರಹಾಕಿದೆ.

ಕೆಲವು ದಿನಗಳ ಹಿಂದೆ ಹಿಂದೂ ದೇವಾಲಯಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದರು. ಜತೆಗೆ, ಅಲ್ಪಸಂಖ್ಯಾತರ ಮನೆಗಳು, ಅಂಗಡಿಗಳಿಗೆ ಬೆಂಕಿ ಹಚ್ಚುವುದು ಮತ್ತು ಲೂಟಿ ಮಾಡಿರುವ ಹಲವು ಪ್ರಕರಣಗಳು ವರದಿಯಾಗಿವೆ. ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಜರುಗಿಸದ ಬಾಂಗ್ಲಾ ಸರ್ಕಾರ, ಶಾಂತಿಯುತವಾಗಿ ಪ್ರತಿಭಟನೆ ನಡೆಸುವವರನ್ನು ಬಂಧಿಸುವುದು ಎಷ್ಟು ಸರಿ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಶ್ನಿಸಿದೆ.

‘ಹಿಂದೂಗಳು ಮತ್ತು ಅಲ್ಪಸಂಖ್ಯಾತರ ಸುರಕ್ಷತೆ ಮತ್ತು ಭದ್ರತೆ ಬಗ್ಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಬಾಂಗ್ಲಾ ಅಧಿಕಾರಿಗಳನ್ನು ಒತ್ತಾಯಿಸಲಾಗಿದೆ. ಕೃಷ್ಣದಾಸ್ ಬಂಧನ ಖಂಡಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆಯೂ ದಾಳಿ ನಡೆಸಿರುವುದು ಅತ್ಯಂತ ಕಳವಳಕಾರಿ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

ಚಿನ್ಮಯ್ ಬಂಧನ ಬಗ್ಗೆ ಬಾಂಗ್ಲಾದೇಶದ ಅಧಿಕಾರಿಗಳು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.