‘ಪ್ರಿಂಟಿಂಗ ಮಶೀನ್’ ನಾಟಕ ಪ್ರದರ್ಶನ
ಬೆಳಗಾವಿ 5- ಜನರನ್ನು ತಲುಪಿಸುವ ಸರಳವಾದ ಮಾಧ್ಯಮವೆಂದರೆ ನಾಟಕ. ಇಂದಿನ ದಿನಗಳಲ್ಲಿ ಕತೆ, ಕವನಗಳನ್ನು ಬರೆಯುವವರಿದ್ದಾರೆ ಅದರೆ ನಾಟಕಗಳನ್ನು ಬರೆಯುವವರ ಸಂಖ್ಯೆಯಿಂದು ತುಂಬ ಕಡಿಮೆಯಾಗುತ್ತಲಿದೆ. ಅದರಲ್ಲಿಯೂ ಪರಿಣಾಮಕಾರಿ ನಾಟಕಗಳನ್ನು ಬರೆಯುವವರರು ವಿರಳ. ವಿರಳರಲ್ಲಿ ಒಬ್ಬರು ಶೀರೀಷ ಜೋಶಿಯವರು. ಇವರಿಂದ ಇನ್ನಷ್ಟು ನಾಟಕಗಳು ಹೊರಬರಲಿ ಎಂದು ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ವೀನೀತಾ ಗೆಜ್ಜಿಯವರು ಇಂದಿಲ್ಲಿ ಹೇಳಿದರು.
ನಗರದ ರಂಗಸೃಷ್ಟಿಯವರು ಇದೇ ದಿನಾಂಕ 4 ಶನಿವಾರದಂದು ಸಾಯಂಕಾಲ 6 ಗಂಟೆಗೆ ಕನ್ನಡ ಭವನದಲ್ಲಿ ಶೀರೀಷ ಜೋಶಿ ರಚಿಸಿದ ‘ಪ್ರಿಂಟಿಂಗ ಮಶೀನ್’ ನಾಟಕ ಲಿಂಗಾಯಿತ ಮಹಾಳಾ ಸಮಾಜ, ಮಹಾಲಕ್ಷ್ಮೀ ಮಹಿಳಾ ಸಮಾಜ, ಕನ್ನಡ ಭವನ, ತೇಜೋಮಯ ಇವರ ಸಹಯೋಗದೊಂದಿಗೆ ಪ್ರದರ್ಶನಗೊಂಡಿತು.
ಮುಂದೆ ಮಾತನಾಡುತ್ತ ಶ್ರೀಮತಿ ವೀನೀತಾ ಅವರು, ಸ್ವಾತಂತ್ರ್ಯ ಯೋಧರಾಗಿದ್ದ ದಿ. ಜಯದೇವರಾವ ಕುಲಕರ್ಣಿಯವರು ನನ್ನ ಅಜ್ಜ. ಅವರ ಜೀವನ ಚರಿತ್ರೆಯಲ್ಲಿಯ ಒಂದು ಘಟನೆಯನ್ನಾಧರಿಸಿಕೊಂಡು ನಾಟಕಕಾರ ಶೀರೀಷ ಜೋಶಿಯವರು ‘ಪ್ರಿಂಟಿಂಗ್ ಮಶೀನ್’ ನಾಟಕಕ್ಕೆ ರೂಪಾಂತರಿಸಿ ಜನರಿಗೆ ಮುಟ್ಟಿಸುವ ಕೆಲಸವನ್ನು ಮಾಡಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮ ಕುರಿತಂತೆ ಇನ್ನೂ ಸಾಕಷ್ಟು ಘಟನಾವಳಿಗಳು ನನ್ನ ಹತ್ತಿರ ಇವೆ. ಅವುಗಳನ್ನು ನಾಟಕ ರೂಪಾಂತರವನ್ನು ಜೋಶಿಯವರು ಮಾಡಲಿ ಎಂದು ಹೇಳಿದರು.
ನಾಟಕವನ್ನು ರಚಿಸಿ ನಿರ್ದೇಶಿಸಿದ ಶೀರೀಷ ಜೋಶಿಯವರು ಮಾತನಾಡುತ್ತ, ನಿರ್ದೇಶಕ ಕಲಾವಿದರಿಗೆ ಕೇವಲ ದಾರಿಯನ್ನು ತೋರಿಸುತ್ತಾನೆ. ಆ ದಾರಿಯಲ್ಲಿ ಸರಿಯಾಗಿ ನಡೆಯಬೇಕಾದವರು ಕಲಾವಿದರು. ಅವರು ಸರಿಯಾಗಿ ನಡೆದು ಗುರಿಯನ್ನು ತಲುಪಿರುವುದೇ ಈ ನಾಟಕದ ಯಶಸ್ಸಿಗೆ ಕಾರಣ. ಎಲ್ಲ ಕಲಾವಿದರಿಗೂ ನನ್ನ ಅಭಿನಂದನೆಗಳು ಎಂದು ಹೇಳಿದರು.
ಕೈಯ್ಯಲ್ಲಿಯ ಲಾಠಿ, ದರ್ದ ಮಾತುಗಳು ಹಾಗೂ ಬೈಗುಳಗಳಿಂದ ಕಲ್ಲೂಕರ ಪೋಜದಾರ ಪಾತ್ರದಲ್ಲಿ ವಿಠ್ಠಲ ಅಸೂದೆ ಎಲ್ಲರ ಮನಸ್ಸನ್ನು ಗೆದ್ದರು ಪೇದೆ ಪಾತ್ರದಲ್ಲಿ ಕಲಾವಿದರಾದ ವಿಶ್ವನಾಥ ದೇಸಾಯಿ ಮತ್ತು ಅರವಿಂದ ಪಾಟೀಲ ನೈಜ ಅಭಿನಯದಿಂದ ಪೋಲಿಸ ಠಾಣೆಯನ್ನೇ ಕಣ್ಣಮುಂದೆ ತಂದು ನಿಲ್ಲಿಸಿದರು. ಕಲಾವಿದ ಶರಣಗೌಡ ಪಾಟೀಲರು ಜಯದೇವ ಕುಲಕರ್ಣಿಯವರ ಪಾತ್ರದಿಂದ ‘ನಾವು ಮತ್ತೊಮ್ಮೆ ಜಯದೇವರಾವ ಅವರನ್ನ ಕಂಡೆವು’ ಎಂಬ ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರರಾದರು. ರಾಷ್ಟ್ರಾಭಿಮಾನದ ಈ ನಾಟಕ ನೋಡಿದ ಜನ “ಭೋಲೋ ಭಾರತ ಮಾತಾ ಕೀ ಜೈ” ಎಂಬ ಜೈಕಾರ ಹಾಕಿದರು.
ಕಲಾವಿದರಾದ ವಾಮನ ಮಾಳಗಿ, ರಾಜಕುಮಾರ ಕುಂಬಾರ, ಶ್ರೀಮತಿ ಶಾಂತಾ ಆಚಾರ್ಯ, ರವಿರಾಜ ಭಟ್, ವಿನೋದ ಸಪ್ಪಣ್ಣವರ, ಜಯಶ್ರೀ ಕ್ಷೀರಸಾಗರ, ಶ್ರದ್ಧಾ ಪಾಟೀಲ, ರಮೇಶ ಮಿರ್ಜಿ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯವನ್ನೋದಗಿಸಿಕೊಟ್ಟರು.
ನೆಳಲು-ಬೆಳಕು ದರ್ಶನ, ಸಂಗೀತ ಶ್ರೀಮತಿ ಮಂಜುಳಾ ಜೋಶಿ, ತಬಲಾ ಜಿತೇಂದ್ರ ಸಾಬಣ್ಣವರ ನಾಟಕ ರಚನೆ ಮತ್ತು ನಿರ್ದೇಶನ ಶೀರೀಷ ಜೋಶಿಯವರದಾಗಿತ್ತು.
ರಂಗಸೃಷ್ಟಿ ಅಧ್ಯಕ್ಷರಾದ ರಮೇಶ ಜಂಗಲ, ರಾಮಕೃಷ್ಣ ಮರಾಠೆ, ಶೈಲಜಾ ಭಿಂಗೆ, ಶಾರದಾ ಭೋಜ, ಭಾರತಿ ವಡವಿ, ಸುನಿತಾ ಸುರೇಶ, ಸ್ಪೂರ್ತಿ ಕರಕರಡ್ಡಿ, ನಿರ್ಮಲಾ ಕಾಮನಗೌಡರ, ರಾಧಿಕಾ ಮಿರ್ಜಿ, ಸುಧಾ ಪಾಟೀಲ, ಶೈಲಜಾ ಕುಲಕರ್ಣಿ, ರಮೇಶ ಜಂಗಲ, ಎಂ.ಕೆ.ಹೆಗಡೆ, ಸಂಬರಗಿಮಠ ಮುಂತಾದವರು ಉಪಸ್ಥಿತರಿದ್ದರು. ಸರ್ವಮಂಗಳಾ ಅರಳಿಮಟ್ಟಿ ನಿರೂಪಿಸಿದರು. ಶರಣಯ್ಯ ಮಠಪತಿ ಪರಿಚಯಿಸಿದರು.