ನಡೆನುಡಿ ಒಂದಾಗಿದ್ದಾಗ ಮಾತ್ರ ಅವು ವಚನಗಳೆನ್ನಿಸಿಕೊಳ್ಳುತ್ತವೆ

ಲೋಕದರ್ಶನ ವರದಿ

ಬೆಳಗಾವಿ 26:  ಎಲ್ಲರ ಮಾತುಗಳು ವಚನಗಳಲ್ಲ ಎಲ್ಲರ ವಚನಗಳೂ ಮಾತುಗಳಲ್ಲ. ಕಾಯಾ ವಾಚಾ ಮನಸ್ಸಿನಿಂದ  ಹೊರಬಂದವುಗಳು ಮಾತ್ರ ವಚನಗಳಾಗುತ್ತವೆ. ನಡೆ ನುಡಿ ಒಂದಾಗಿದ್ದರೆ ಮಾತ್ರವೇ ಅವು ವಚನಗಳೆನ್ನಿಸಿಕೊಳ್ಳುತ್ತವೆ. ಅನೇಕ ಸಮಸ್ಯೆಗಳ ಪರಿಹಾರದ ಸೂತ್ರಗಳು, ಸುಂದರವಾಗಿ ಬದುಕಲು ಬೇಕಾದ ಪ್ರಮಾಣಗಳು ವಚನ ಸಾಹಿತ್ಯದಲ್ಲಿದೆ. ಇವು ನೆಮ್ಮದಿಯ ಬದುಕಿಗೆ ಜೀವನ ಸಾಹಿತ್ಯವಾಗಿದೆ, ಎಂದು ಎಸ್. ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲುತ್ತಿರುವ ಛ. ಇಂದಿಲ್ಲಿ ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭೆ(ರಿ) ಜಿಲ್ಲಾ ಘಟಕ  ಹಾಗೂ ರಾಷ್ಟ್ರೀಯ ಬಸವಸೇನಾ ಜಿಲ್ಲಾ ಘಟಕ ಬೆಳಗಾವಿ ಸಂಯುಕ್ತ ಆಶ್ರಯದಲ್ಲಿ ಇದೇ ದಿ. 24 ಶುಕ್ರವಾರದಂದು ಸಾಯಂಕಾಲ 6ಕ್ಕೆ ಮಹಾಂತೇಶ ನಗರದಲ್ಲಿರುವ ಮಹಾಂತ ಭವನದಲ್ಲಿ ಮಾಸಿಕ ಅನುಭಾವ ಸತ್ಸಂಗ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. "ನೆಮ್ಮದಿಯ ಬದುಕಿಗೆ ಶರಣ ಸಾಹಿತ್ಯ ವಿಷಯ ಕುರಿತು ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ  ಡಾ.ವೀರಣ್ಣ ಡಿ.ಕೆ. ಮೇಲಿನಂತೆ ಅಭಿಪ್ರಾಯ ವ್ಯಕ್ತ ಪಡಿಸಿದರು.

ಡಾ.ವೀರಣ್ಣನವರು ದೇಶಕ್ಕೆ ಬುದ್ಧಿವಂತರ ಅವಶ್ಯಕತೆಕ್ಕಿಂತ ಹೃದಯವಂತರ ಅವಶ್ಯಕತೆ ಇದೆ. ಮಾನವನ ಬೌದ್ಧಿಕ ವಿಕಾಸದ ಮೊದಲ ಮೆಟ್ಟಲು ವಚನ. ಅದರ ಸಾರಸತ್ವವನ್ನ ನಿತ್ಯ ಬದುಕಿನಲ್ಲಿ ಅಳವಡಿಸಿಕೊಂಡು ಬದುಕಬೇಕು, ಎಂದು ತಮ್ಮ ಅನುಭಾವದ ನುಡಿಗಳನ್ನು ಉಣಬಡಿಸಿದರು. ಶರಣರು ಕೊಟ್ಟ ಆಸ್ತಿ ನಮ್ಮಲ್ಲಿಯೇ ಅಪಾರವಾಗಿರುವಾಗ ಬೇರೆ ಆಸ್ತಿಗೆ ಕೈಚಾಚುವದನ್ನ ಬಿಡಬೇಕು ಎಂದು ಹೇಳಿದರು. 

ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ರುದ್ರಾಕ್ಷಿ ಮಠ ನಾಗನೂರ ಬೆಳಗಾವಿ ಇವರು ಕಾರ್ಯಕ್ರಮದ ಸಾನಿದ್ಯವಹಿಸಿ, ಮೇಲಿಂದ ಮೇಲೆ ಇಂತಹ ಅನುಭಾವ ಸತ್ಸಂಗಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಬದುಕನ್ನ ಹಸನಾಗಿಕೊಳ್ಳಬೇಕು ಅದಲ್ಲದೇ ಇಂತಹ ಸತ್ಸಂಗಗಳಲ್ಲಿ ತಮ್ಮ ಮಕ್ಕಳನ್ನು ಪಾಲ್ಗೊಳ್ಳಲು ಅವಕಾಶ ನೀಡುವ ಮೂಲಕ ಅವರನ್ನು ಸಂಸ್ಕಾರಯುತ ಸತ್ಪ್ರಜೆಗಳನ್ನಾಗಿ ಬೆಳೆಸುವದು ಪಾಲಕರ ಕರ್ತವ್ಯ ಅಂತಾ ತಮ್ಮ ಆಶೀರ್ವಚನದ ಮೂಲಕ ತಿಳಿಸಿದರು. 

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಅರವಿಂದ ಪರುಶೆಟ್ಟಿಯವರು ತಾವು ತಯಾರಿಸಿದ ಇಷ್ಟಲಿಂಗದ ಕುರಿತು ತಿಳಿಸಿದರು. ಶರಣ ದಂಪತಿಗಳಾದ ಚಂದ್ರಕಲಾ ಸುದರ್ಶನ ಬೋರಗಲ್ಲಿ ರವರು ಷಟ್ ಸ್ಥಲ ಧ್ವಜಾರೋಹಣ ನೆರವೇರಿಸಿದ್ದಲ್ಲದೇ ಪ್ರಸಾದ ದಾಸೋಹ ವ್ಯವಸ್ಥೆ ಕೂಡಾ ಮಾಡಿದ್ದರು. ಚೆನ್ನಬಸವ ನರಸನ್ನವರ ಸ್ವಾಗತಿಸಿದರು. ರಾಜು ಪದ್ಮನ್ನವರ ರವರು ಶರಣು ಸಮರ್ಪಣೆ ಮಾಡಿದರು. ಅಶೋಕ ಮಳಗಲಿಯವರು ನಿರೂಪಣೆ ಮಾಡಿದರು.